ಗಂಡು ನವಿಲಿನ ಕಣ್ಣೀರಿಗೆ ಕರಗುತ್ತಿ ರುವ ನ್ಯಾಯಾಧೀಶರು

ಸಂಪಾದಕೀಯ
———-
ಗಂಡು ನವಿಲಿನ ಕಣ್ಣೀರಿಗೆ ಕರಗುತ್ತಿ ರುವ ನ್ಯಾಯಾಧೀಶರು

ವಾರ್ತಾ ಭಾರತಿ Jul 03, 2017, 12:18 AM IST

ಪ್ರಜಾಸತ್ತೆ ಆತಂಕದ ಸ್ಥಿತಿಯಲ್ಲಿದ್ದಾಗ ಶ್ರೀಸಾಮಾನ್ಯನಿಗೆ ಇರುವ ಏಕೈಕ ಆಸರೆ ನ್ಯಾಯವ್ಯವಸ್ಥೆ. ನ್ಯಾಯವ್ಯವಸ್ಥೆಯ ಉನ್ನತ ಸ್ಥಾನದಲ್ಲಿ ಕುಳಿತ ನ್ಯಾಯಾಧೀಶನಿಗೆ ಖಾಸಗಿ ನಂಬಿಕೆಗಳು ನೂರಾರು ಇರಬಹುದು. ವೈಯಕ್ತಿಕವಾಗಿ ಅವನು ದೇವರನ್ನು ನಂಬಬಹುದು, ನಂಬದಿರಬಹುದು. ಸ್ವಾಮೀಜಿಗಳು, ಪುರೋಹಿತರ ಮೇಲೆ ಗೌರವ ಇರಬಹುದು, ಇಲ್ಲದೇ ಇರಬಹುದು. ಅವನೂ ರಾಜಕೀಯ ನಿಲುವುಗಳನ್ನು ಹೊಂದಿದ್ದು, ಕೆಲವು ಸಿದ್ಧಾಂತಗಳನ್ನು ನಂಬುವವನಾಗಿರಬಹುದು. ಆದರೆ ನ್ಯಾಯಾಲಯದ ಕುರ್ಚಿಯಲ್ಲಿ ಕೂತ ಕ್ಷಣ ಅವನ ಧರ್ಮ, ಅವನ ನಂಬಿಕೆ, ಅವನ ಸಿದ್ಧಾಂತ ಎಲ್ಲವೂ ಸಂವಿಧಾನವೇ ಆಗಿರುತ್ತದೆ. ಒಂದು ವೇಳೆ, ಆ ಸ್ಥಾನದಲ್ಲಿ ಕೂತು ಸಂವಿಧಾನವನ್ನು ಪಾಲಿಸಲು ಸಾಧ್ಯವಾಗುವುದಿಲ್ಲ ಎಂದರೆ ಆತ ತಕ್ಷಣ ಸ್ಥಾನಕ್ಕೆ ರಾಜೀನಾಮೆ ನೀಡಿ ಸ್ಥಾನದ ಘನತೆಯನ್ನು ಕಾಪಾಡುವುದು ಆತನ ಹೊಣೆಗಾರಿಕೆಯಾಗಿರುತ್ತದೆ.

ಇತ್ತೀಚೆಗೆ ರಾಜಸ್ಥಾನದ ಹೈಕೋರ್ಟ್ ನ್ಯಾಯಾಧೀಶರೊಬ್ಬರ ಪ್ರಕರಣ ದೇಶಾದ್ಯಂತ ಚರ್ಚೆಯಾಯಿತು. ನಿವೃತ್ತಿಯ ಅಂಚಿನಲ್ಲಿರುವಾಗ ಗೋಹತ್ಯೆ ಕುರಿತಂತೆ ತೀರ್ಪೊಂದನ್ನು ನೀಡುವ ಸಂದರ್ಭದಲ್ಲಿ, ತನ್ನ ತೀರ್ಪಿಗೆ ಅವರು ಆಧಾರವಾಗಿ ಬಳಸಿರುವುದು ಪುರಾಣದ ಕಟ್ಟು ಕತೆಗಳನ್ನು. ಇದನ್ನು ಅವರು ಪತ್ರಕರ್ತರ ಜೊತೆಗೆ ಮಾತನಾಡುವ ಸಂದರ್ಭದಲ್ಲಿ ಬಹಿರಂಗಪಡಿಸಿದ್ದಾರೆ. ‘ನವಿಲು ಯಾಕೆ ಪವಿತ್ರ ಎಂದರೆ, ಅದು ಪರಸ್ಪರ ಸಂಭೋಗ ನಡೆಸುವುದಿಲ್ಲ. ಗಂಡು ನವಿಲು ಬ್ರಹ್ಮಚಾರಿ. ಗಂಡು ನವಿಲಿನ ಕಣ್ಣೀರನ್ನು ಕುಡಿದು ಹೆಣ್ಣು ನವಿಲು ಗರ್ಭ ಧರಿಸುತ್ತದೆ’ ಎಂದು ಹೇಳಿದರು. ಇದು ಯಾವನೋ ರಾಜಕಾರಣಿ ಆಡಿದ್ದರೆ ತಮಾಷೆ ಮಾಡಿ ಮುಗಿಸಬಹುದಿತ್ತು. ಆದರೆ ಈ ಹೇಳಿಕೆಯನ್ನು ನೀಡಿರುವುದು ಒಬ್ಬ ನ್ಯಾಯಾಧೀಶ.

ಗೋವಿನ ಶ್ರೇಷ್ಠತೆಯನ್ನು ಹೇಳುವಾಗಲೂ ಆತ ಸಂವಿಧಾನದ ನಿಲುವುಗಳನ್ನು ಸಂಪೂರ್ಣವಾಗಿ ಬದಿಗಿಟ್ಟು, ಕಟ್ಟುಕತೆಗಳನ್ನೇ ಆಧರಿಸಿ ತೀರ್ಪನ್ನು ನೀಡಿದ್ದರು. ಅವರು ತೀರ್ಪಿಗೆ ಬಳಸಿರುವ ಆಧಾರಗಳೇ ಆ ತೀರ್ಪಿನ ಗುಣಮಟ್ಟವನ್ನು ನಿರ್ಧರಿಸುತ್ತದೆ. ಸಮಸ್ಯೆ ಇದಲ್ಲ. ‘ನವಿಲು ಲೈಂಗಿಕ ಸಂಪರ್ಕದ ಮೂಲಕ ಗರ್ಭ ಧರಿಸುವುದಿಲ್ಲ’ ಎನ್ನುವುದನ್ನು ನಂಬುವಷ್ಟು ವೌಢ್ಯವನ್ನು ತಳೆದಿರುವ ಮತ್ತು ಆ ವೌಢ್ಯವನ್ನು ತನ್ನ ನ್ಯಾಯ ಪೀಠದವರೆಗೂ ಎಳೆದು ತಂದಿರುವ ಈ ನ್ಯಾಯಾಧೀಶ ತನ್ನ ಅವಧಿಯುದ್ದಕ್ಕೂ ನೀಡಿರುವ ತೀರ್ಪು ನಿಜಕ್ಕೂ ಸಂವಿಧಾನಕ್ಕೆ ಬದ್ಧವಾಗಿತ್ತು ಎಂದು ನಂಬುವುದು ಹೇಗೆ? ಸಂವಿಧಾನಕ್ಕಿಂತ ಪುರಾಣಪುಸ್ತಕಗಳನ್ನೇ ವಾಸ್ತವವೆಂದು ನಂಬಿರುವ ಈ ನ್ಯಾಯಾಧೀಶರು ತನ್ನ ಕಾಲಾವಧಿಯಲ್ಲಿ ನೀಡಿರುವ ಎಲ್ಲ ತೀರ್ಪುಗಳನ್ನು ಪುನರ್ ಪರಿಶೀಲಿಸುವ ಅಗತ್ಯವಿಲ್ಲವೇ?

ಒಬ್ಬ ಇಂಜಿನಿಯರ್ ದುರ್ಬಲ ಸೇತುವೆ ನಿರ್ಮಿಸಿದರೆ ಆತನ ಮೇಲೆ ಮೊಕದ್ದಮೆ ದಾಖಲಿಸಲಾಗುತ್ತದೆ. ಭ್ರಷ್ಟಾಚಾರ ಎಸಗಿದ್ದರೆ ಆತನನ್ನು ಜೈಲಿಗೂ ತಳ್ಳಲಾಗುತ್ತದೆ. ಎಲ್ಲ ಕ್ಷೇತ್ರಗಳಿಗೂ ಇದು ಅನ್ವಯವಾಗುತ್ತದೆ. ಆದರೆ ಒಬ್ಬ ಹೈಕೋರ್ಟ್ ನ್ಯಾಯಾಧೀಶ ತಾನು ನಂಬಿರುವ ಪೊಳ್ಳು ನಂಬಿಕೆಗಳ ಆಧಾರದಲ್ಲಿ ತೀರ್ಪು ನೀಡಿ, ನ್ಯಾಯವ್ಯವಸ್ಥೆಯನ್ನು ಕಲಬೆರಕೆ ಮಾಡಿದರೆ ಆತನಿಗೇನು ಶಿಕ್ಷೆ? ಆತ ನೀಡಿರುವ ತೀರ್ಪು ಮೇಲಿನ ನ್ಯಾಯಾಲಯದಲ್ಲಿ ರದ್ದಾಗಬಹುದು ನಿಜ. ಆದರೆ ಆತ ಒಂದು ವೇಳೆ ತನ್ನ ತೀರ್ಪಿಗೆ ಸಂವಿಧಾನವನ್ನು ಆಧಾರವಾಗಿ ಬಳಸದೇ ಇದ್ದರೆ ಅದು ನ್ಯಾಯಾಲಯಕ್ಕೆ ಮಾಡಿದ ಅಪಚಾರವಾಗುವುದಿಲ್ಲವೇ? ಅಷ್ಟೇ ಅಲ್ಲ, ಅಂತಹ ತೀರ್ಪಿನಿಂದ ಸಂತ್ರಸ್ತರಿಗೆ ಆಗುವ ತೊಂದರೆಯನ್ನು, ಶ್ರಮವನ್ನು ತುಂಬಿಕೊಡುವವರು ಯಾರು?

ರಾಜ್ಯದಲ್ಲಿ ರಾಘವೇಶ್ವರ ಸ್ವಾಮೀಜಿಯ ಅತ್ಯಾಚಾರ ಪ್ರಕರಣದ ವಿಚಾರಣಾ ಪ್ರಕ್ರಿಯೆ ಇಂತಹದೊಂದು ಪ್ರಶ್ನೆಯನ್ನು ಮತ್ತೊಮ್ಮೆ ಕೇಳುವಂತೆ ಮಾಡಿದೆ. ಹಿಂದೂ ಸಮಾಜ, ಅದರಲ್ಲೂ ಬ್ರಾಹ್ಮಣರ ಒಂದು ಸಮುದಾಯವಂತೂ ರಾಘವೇಶ್ವರ ಪ್ರಕರಣದಲ್ಲಿ ಸಾಕಷ್ಟು ಮುಜುಗರ ಅನುಭವಿಸಿದೆ. ಎಲ್ಲಕ್ಕಿಂತ ಮುಖ್ಯವಾಗಿ ಒಂದು ಕುಟುಂಬ ಈ ಪ್ರಕರಣದಿಂದ ಸಾಕಷ್ಟು ಅವಮಾನಗಳಿಂದ ನೊಂದು ಹೋಗಿದೆ. ಆ ಕುಟುಂಬದ ಒಬ್ಬ ಸದಸ್ಯ ಆತ್ಮಹತ್ಯೆಯಂತಹ ಕೃತ್ಯಕ್ಕೂ ಇಳಿಯಬೇಕಾಯಿತು. ಆದರೆ ನ್ಯಾಯ ಕೇಳಿದ ಹೆಣ್ಣು ಮಗಳಿಗೆ ಮಾತ್ರ ಈವರೆಗೆ ನ್ಯಾಯ ಸಿಕ್ಕಿಲ್ಲ. ವಿಚಿತ್ರವೆಂದರೆ, ನ್ಯಾಯಾಲಯ ಈವರೆಗೆ ರಾಘವೇಶ್ವರರು ಅಕ್ರಮವಾಗಿ ಲೈಂಗಿಕ ಅನಾಚಾರವೆಸಗಿಲ್ಲ ಎಂದು ಸ್ಪಷ್ಟಪಡಿಸಿಲ್ಲ. ಸ್ವಾಮೀಜಿಗಳು ಲೈಂಗಿಕ ಸಂಪರ್ಕ ಹೊಂದಿರುವುದನ್ನು ಪರೋಕ್ಷವಾಗಿ ನ್ಯಾಯಾಲಯವೇ ಹೇಳುತ್ತದೆ. ಆದರೆ ಅದನ್ನು ಅತ್ಯಾಚಾರವೆಂದು ಕರೆಯಲು ಹಿಂಜರಿಯುತ್ತದೆ.

ತನ್ನನ್ನು ತಾನು ಸ್ವಯಂ ಬ್ರಹ್ಮಚಾರಿ, ಹಿಂದೂ ನಾಯಕ ಎಂದೆಲ್ಲ ಜನರನ್ನು ನಂಬಿಸಿ ಅಧ್ಯಾತ್ಮಿಕ ಹುದ್ದೆಯೊಂದನ್ನು ಅಲಂಕರಿಸಿರುವ ರಾಘವೇಶ್ವರು ಆ ಮೂಲಕ ಜನರನ್ನು ಮೋಸಗೊಳಿಸಿರುವುದನ್ನು ನ್ಯಾಯಾಲಯ ಮೃದುವಾಗಿ ತೆಗೆದುಕೊಂಡಿದೆ. ಅತ್ಯಾಚಾರ ಆರೋಪ ಬಂದ ಕಾರಣಕ್ಕಾಗಿ ಒಬ್ಬ ಸಚಿವ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿ ಆ ಸ್ಥಾನದ ಘನತೆಯನ್ನು ಉಳಿಸುತ್ತಾನೆ. ಆದರೆ ಸಮಾಜಕ್ಕೆ ನೈತಿಕತೆಯನ್ನು ಬೋಧಿಸಬೇಕಾದಂತಹ ಸ್ಥಾನದಲ್ಲಿರುವ ರಾಘವೇಶ್ವರ ಸ್ವಾಮೀಜಿಗಳಿಗೆ ಮಾತ್ರ ತನ್ನ ಸ್ಥಾನದ ಘನತೆಯನ್ನು ಉಳಿಸಬೇಕೆಂದು ಈವರೆಗೆ ಅನ್ನಿಸಿಲ್ಲ. ರಾಘವೇಶ್ವರ ಸ್ವಾಮೀಜಿಗಳ ಪ್ರಕರಣದಲ್ಲಿ ನ್ಯಾಯಾಧೀಶರು ಮೃದುವಾಗಿ ನಡೆದುಕೊಳ್ಳುವ ಮೂಲಕ ಒಂದು ಹೆಣ್ಣಿಗೆ, ಒಂದು ಕುಟುಂಬಕ್ಕೆ ಮಾತ್ರವಲ್ಲ, ಸಮಾಜಕ್ಕೇ ಹಾನಿ ಮಾಡುತ್ತಿದ್ದಾರೆ.

ರಾಘವೇಶ್ವರ ಪ್ರಕರಣದಲ್ಲಿ ನ್ಯಾಯಾಲಯದ ತೀರ್ಪುಗಳ ಕುರಿತಂತೆ ಅನುಮಾನ ವ್ಯಕ್ತಪಡಿಸಲು ಮುಖ್ಯವಾದ ಕಾರಣ, ಈ ವಿಚಾರಣೆಯಿಂದ ಆರು ಹೈಕೋರ್ಟ್ ನ್ಯಾಯಾಧೀಶರು ಹಿಂದೆ ಸರಿದಿರುವುದು. ಎರಡು ದಿನಗಳ ಹಿಂದೆ ಇನ್ನೊಬ್ಬ ಮುಖ್ಯ ನ್ಯಾಯಾಧೀಶರೂ ಈ ವಿಚಾರಣೆಯಿಂದ ಹಿಂದೆ ಸರಿದಿದ್ದಾರೆ. ಶಸ್ತ್ರಕ್ರಿಯೆ ಮಾಡುವ ಸಂದರ್ಭದಲ್ಲಿ ತನ್ನ ಮುಂದೆ ಅದೆಷ್ಟೇ ದೊಡ್ಡ ವ್ಯಕ್ತಿ ಮಲಗಿರಲಿ, ಆತ ಒಬ್ಬ ರೋಗಿ ಮಾತ್ರ ಆಗಿರುತ್ತಾನೆ. ಒಂದು ವೇಳೆ, ಗ್ಯಾಂಗ್ರಿನ್‌ನಿಂದ ರೋಗಿಯ ಕಾಲು ಕತ್ತರಿಸಲೇ ಬೇಕು ಎನ್ನುವಂತಹ ಸ್ಥಿತಿ ಬಂದರೆ, ವೈದ್ಯರು ಅದನ್ನು ಯಾವ ದಾಕ್ಷಿಣ್ಯವೂ ಇಲ್ಲದೆ ಕತ್ತರಿಸುತ್ತಾರೆ. ಹಾಗೆಯೇ, ಕಟಕಟೆಯಲ್ಲಿ ಅದೆಷ್ಟೇ ದೊಡ್ಡ ವ್ಯಕ್ತಿ ನಿಂತಿರಲಿ. ನ್ಯಾಯಾಧೀಶರ ಪಾಲಿಗೆ ಆತ ಆರೋಪಿ. ಅವನು ಸ್ವಾಮೀಜಿ ಎನ್ನುವ ಕಾರಣಕ್ಕಾಗಿ ನ್ಯಾಯಾಧೀಶ ಹಿಂದೆ ಸರಿಯುವಂತಿಲ್ಲ. ನ್ಯಾಯಾಧೀಶನ ವೈಯಕ್ತಿಕ ನಂಬಿಕೆಯೇ ಬೇರೆ. ನ್ಯಾಯಾಲಯದಲ್ಲಿ ಆತ ತಾನು ನಂಬಿದ ಸಂವಿಧಾನಕ್ಕೆ ಬದ್ಧನಾಗಿರಬೇಕೇ ಹೊರತು, ತನ್ನ ಖಾಸಗಿ ನಂಬಿಕೆಗಲ್ಲ. ಒಂದು ವೇಳೆ ತನ್ನ ವೈಯಕ್ತಿಕ ನಂಬಿಕೆ ತೀರಾ ಕಾಡುತ್ತದೆ ಎಂದರೆ, ಆತ ವಿಚಾರಣೆಯಿಂದ ಹಿಂದೆ ಸರಿಯುವ ಬದಲು ತನ್ನ ವೃತ್ತಿಗೆ ರಾಜೀನಾಮೆ ನೀಡುವುದು ಅತ್ಯುತ್ತಮ ಮಾರ್ಗ.

ಆದರೆ ಕೆಲವು ಪ್ರಕರಣಗಳಲ್ಲಿ ಸಂವಿಧಾನಕ್ಕೆ ಗೌರವ ಕೊಡದೆ, ವೈಯಕ್ತಿಕ ನಂಬಿಕೆಗಳಿಗೆ ಗೌರವ ಕೊಟ್ಟು, ನೆಪಗಳನ್ನೊಡ್ಡಿ ವಿಚಾರಣೆಯಿಂದ ಹಿಂದೆ ಸರಿಯುವುದು ಅವರ ಉಳಿದ ತೀರ್ಪುಗಳ ವಿಶ್ವಾಸಾರ್ಹತೆಯನ್ನು ಅನುಮಾನಿಸುವಂತೆ ಮಾಡುತ್ತದೆ. ಸದ್ಯಕ್ಕೆ ಕರ್ನಾಟಕದ ನ್ಯಾಯಾಧೀಶರು ರಾಜಸ್ಥಾನದ ಹೈಕೋರ್ಟ್ ನ್ಯಾಯಾಧೀಶರಿಗಿಂತ ತಾವು ಭಿನ್ನವಾಗಿಯೇನೂ ಇಲ್ಲ ಎನ್ನುವುದನ್ನು ಸಾಬೀತು ಮಾಡುತ್ತಿದ್ದಾರೆ. ಅಲ್ಲಿನ ನ್ಯಾಯಾಧೀಶರು ಗಂಡು ನವಿಲು ಬ್ರಹ್ಮಚಾರಿ ಎಂದರೆ, ಇಲ್ಲಿನ ನ್ಯಾಯಾಧೀಶರು ರಾಘವೇಶ್ವರರೆಂಬ ಗಂಡು ನವಿಲಿನ ಕಣ್ಣೀರಿಗೆ ಪರೋಕ್ಷವಾಗಿ ಬಸುರಾಗಿದ್ದಾರೆ.

source: http://www.varthabharati.in/article/sampaadakeeya/81175

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s