ಸುಮ್ನೆ ಗೋಕರ್ಣ ದೇಗುಲ ಹಿಂತಿರುಗಿಸಿ

ರಾಘವೇಶ್ವರ ಶ್ರೀಗಳಿಗೆ ಆಪ್ತರ ಮೂಲಕ ಯಡಿಯೂರಪ್ಪ ಸಲಹೆ ?

ಸುಮ್ನೆ ಗೋಕರ್ಣ ದೇಗುಲ ಹಿಂತಿರುಗಿಸಿ

ಬಿ.ಎಸ್.ಷಣ್ಮುಖಪ್ಪ
19 Nov, 2016

‘ಗೋಕರ್ಣ ಮಹಾಬಲೇಶ್ವರ ದೇವಾಲಯವನ್ನು ಸರ್ಕಾರದ ಸುಪರ್ದಿಗೆ ಹಿಂದಿರುಗಿಸುವುದು ಒಳಿತು‘ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಶ್ರೀಗಳಿಗೆ ಮೌಖಿಕ ಸಂದೇಶ ರವಾನಿಸಿದ್ದಾರೆ.

ಬೆಂಗಳೂರು: ‘ಗೋಕರ್ಣ ಮಹಾಬಲೇಶ್ವರ ದೇವಾಲಯವನ್ನು ಸರ್ಕಾರದ ಸುಪರ್ದಿಗೆ ಹಿಂದಿರುಗಿಸುವುದು ಒಳಿತು‘ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಶ್ರೀಗಳಿಗೆ ಮೌಖಿಕ ಸಂದೇಶ ರವಾನಿಸಿದ್ದಾರೆ.

ಶ್ರೀಗಳಿಗೆ ಆಪ್ತರು ಎನ್ನಲಾದ ಸಾಗರದ ಹಿರಿಯ ಸಹಕಾರಿ ಧುರೀಣ ಹರನಾಥ ರಾವ್‌ ಮತ್ತಿಕೊಪ್ಪ, ವಕೀಲ ಕೆ.ಎನ್‌.ಶ್ರೀಧರ ಹಾಗೂ ಯಡಿಯೂರಪ್ಪ ಆಪ್ತ ಸಹಾಯಕ ಗುರುಮೂರ್ತಿ ಅವರ ಮೂಲಕ ಯಡಿಯೂರಪ್ಪ, ಸ್ವಾಮೀಜಿಗೆ ಈ ಸಂದೇಶ ತಲುಪಿಸಿದ್ದಾರೆ ಎಂದು ತಿಳಿದು ಬಂದಿದೆ.

ಆದರೆ ಸ್ವಾಮೀಜಿ ಈ ಸಲಹೆಯನ್ನು ಸಾರಾಸಗಟಾಗಿ ಧಿಕ್ಕರಿಸಿ, ‘ಯಾಕೆ ಹಿಂದಕ್ಕೆ ಕೊಡಬೇಕು’ ಎಂದು ಮರು ಪ್ರಶ್ನಿಸಿದ್ದಾರಲ್ಲದೆ, ಸಂದೇಶ ಹೊತ್ತೊಯ್ದವರ ಮೇಲೆ ಹರಿಹಾಯ್ದಿದ್ದಾರೆ’ ಎಂದು ಮೂಲಗಳು ‘ಪ್ರಜಾವಾಣಿ’ಗೆ ಸ್ಪಷ್ಟಪಡಿಸಿವೆ.

ನ್ಯಾಯಾಂಗ ನಿಂದನೆ ಗುಮ್ಮ: ದೇವಾಲಯವನ್ನು ಮಠಕ್ಕೆ ವಹಿಸಿರುವ ಕುರಿತಂತೆ ಹೈಕೋರ್ಟ್‌ನಲ್ಲಿ ಸದ್ಯ ನ್ಯಾಯಾಂಗ ನಿಂದನೆ ಮೊಕದ್ದಮೆ ನಡೆಯುತ್ತಿದೆ. ಇದು ಅವರ ಭವಿಷ್ಯಕ್ಕೆ ಮಾರಕವಾಗಬಹುದು ಎಂಬ ಅಂದಾಜಿನಲ್ಲಿ ಯಡಿಯೂರಪ್ಪ ಈ ಸಲಹೆಗೆ ಮುಂದಾಗಿದ್ದಾರೆ ಎನ್ನಲಾಗಿದೆ.

ಹರನಾಥರಾವ್‌,ಶ್ರೀಧರ ಹಾಗೂ ಗುರುಮೂರ್ತಿ ಅವರನ್ನು ಯಡಿಯೂರಪ್ಪ ಅವರು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಶಿಕಾರಿಪುರದ ತಮ್ಮ ನಿವಾಸಕ್ಕೆ ಕರೆಸಿಕೊಂಡು ಈ ಕುರಿತಂತೆ ಚರ್ಚಿಸಿದ್ದರು ಎಂದು ಹೇಳಲಾಗಿದೆ.

ಯಡಿಯೂರಪ್ಪ ಅವರ ಸಂದೇಶವನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವಾಸದಲ್ಲಿದ್ದ ಶ್ರೀಗಳಿಗೆ ತಲುಪಿಸಲಾಗಿದೆ. ಆದರೆ, ಶ್ರೀಗಳು ಈ ಸಲಹೆಯನ್ನು ತಿರಸ್ಕರಿಸಿದ್ದಾರೆ. ‘ಆವತ್ತು ದೇಗುಲವನ್ನು ನಮ್ಮ ಸುಪರ್ದಿಗೆ ಬಿಟ್ಟುಕೊಡುವಾಗ ಇದನ್ನೆಲ್ಲಾ ಅವರು ಚಿಂತಿಸಲಿಲ್ಲವೇ’ ಎಂದು ಶ್ರೀಗಳು ಕಿಡಿ ಕಾರಿದ್ದಾಗಿ ಮೂಲಗಳು ವಿವರಿಸಿವೆ.

ಉತ್ತರಕನ್ನಡ ಜಿಲ್ಲೆಯ ಗೋಕರ್ಣ ಮಹಾಬಲೇಶ್ವರ ದೇವಾಲಯದ ಹಸ್ತಾಂತರಕ್ಕೆ ಸಂಬಂಧಿಸಿಂತೆ ಅಧಿಕಾರಿಗಳ ಮೇಲಿನ ನ್ಯಾಯಾಂಗ ನಿಂದನೆ ದಾವೆ ವಿಚಾರಣೆಗೆ ಇದ್ದ ತಡೆಯಾಜ್ಞೆಯನ್ನು ಸುಪ್ರೀಂ ಕೋರ್ಟ್ ಇತ್ತೀಚೆಗೆ ತೆರವುಗೊಳಿಸಿದ ಕಾರಣ ಯಡಿಯೂರಪ್ಪ ಈ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಗೋಕರ್ಣ ದೇವಾಲಯವನ್ನು ಕರ್ನಾಟಕ ರಾಜ್ಯ ಸರ್ಕಾರ 2008ರ ಆಗಸ್ಟ್‌ 12ರಂದು ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರ ಮಾಡಿತ್ತು. ಆಗ ಯಡಿಯೂರಪ್ಪ ಅವರೇ ಮುಖ್ಯಮಂತ್ರಿ ಆಗಿದ್ದರು. ಸರ್ಕಾರದ ಈ ಕ್ರಮವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು. ಏಕಸದಸ್ಯ ಪೀಠ 2007ರಲ್ಲಿ ಆದೇಶ ನೀಡಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚಿಸಿತ್ತು. ಸರ್ಕಾರ ಈ ಆದೇಶವನ್ನು ಉಲ್ಲಂಘನೆ ಮಾಡಿದೆ ಎಂದು ದೇವಸ್ಥಾನದ ಹಿಂದಿನ ಟ್ರಸ್ಟಿ ಬಾಲಚಂದ್ರ ದೀಕ್ಷಿತ್‌ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು.

ಈ ಪ್ರಕರಣದಲ್ಲಿ ಅಂದಿನ ಕಂದಾಯ ಇಲಾಖೆ ಕಾರ್ಯದರ್ಶಿ ಎನ್‌.ನಾರಾಯಣ ಸ್ವಾಮಿ, ಧಾರ್ಮಿಕ ದತ್ತಿ ಆಯುಕ್ತ ಕೆ.ಪ್ರಭಾಕರ, ಧಾರ್ಮಿಕ ದತ್ತಿ ಪೀಠಾಧಿಕಾರಿ ಶ್ರೀಕಂಠ ಬಾಬು ಮತ್ತು ಕುಮಟಾ ಉಪ ವಿಭಾಗಾಧಿಕಾರಿ ವಿ.ಎಸ್‌.ಚೌಗುಲೆ ವಿರುದ್ಧ ನ್ಯಾಯಾಂಗ ನಿಂದನೆ ಆರೋಪ ಹೊರಿಸಲಾಗಿದೆ.

ಈ ನಾಲ್ವರೂ ಅಧಿಕಾರಿಗಳು ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಬೇಷರತ್‌ ತಪ್ಪೊಪ್ಪಿಗೆ ಪತ್ರ ನೀಡಿದ್ದರು. ಹೀಗಾಗಿ ಇವರ ವಿರುದ್ಧ ದೋಷಾರೋಪ ಹೊರಿಸುವ ಹಂತಕ್ಕೆ ವಿಚಾರಣೆ ತಲುಪಿತ್ತು.

ಈ ಸಂದರ್ಭದಲ್ಲಿ, ಈ ಪ್ರಕರಣ ಸಂಚಾರಿ ಪೀಠದಲ್ಲಿ ವಿಚಾರಣೆ ನಡೆಯಬೇಕೊ ಅಥವಾ ಪ್ರಧಾನ ಪೀಠ ಬೆಂಗಳೂರಿನಲ್ಲಿ ನಡೆಯಬೇಕೊ ಎಂಬ ಸಂಗತಿ ಜಿಜ್ಞಾಸೆಗೆ ಕಾರಣವಾಯಿತು.

ಈ ತಾಂತ್ರಿಕ ಅಂಶದ ಮೇಲೆ ವಾದ–ಪ್ರತಿವಾದ ನಡೆಯಿತು. ಅಂತಿಮವಾಗಿ ಅಂದು ಧಾರವಾಡದ ವಿಭಾಗೀಯ ಪೀಠದ ನೇತೃತ್ವ ವಹಿಸಿದ್ದ ನ್ಯಾಯಮೂರ್ತಿ ಎನ್‌.ಕುಮಾರ್‌ ಅವರು, ‘ಸಾರ್ವಜನಿಕ ಹಿತಾಸಕ್ತಿ ಹಾಗೂ ನ್ಯಾಯಾಂಗ ನಿಂದನೆ ಅರ್ಜಿಗಳ ವಿಚಾರಣೆಗಳೆಲ್ಲಾ ಪ್ರಧಾನ ಪೀಠದಲ್ಲೇ ನಡೆಯಬೇಕು’ ಎಂದು ಆದೇಶಿಸಿದ್ದರು.

ಈ ವೇಳೆ ಪ್ರಕರಣದಲ್ಲಿ ಹೈಕೋರ್ಟ್‌ ರಿಜಿಸ್ಟ್ರಾರ್‌ ಜನರಲ್‌ ಅವರಿಗೆ, ‘ಇದನ್ನು ಬೆಂಗಳೂರಿನಲ್ಲೇ ವಿಚಾರಣೆ ನಡೆಸಬೇಕು’ ಎಂದೂ ಸೂಚಿಸಲಾಗಿತ್ತು.‘ಈ ಪ್ರಕರಣದಲ್ಲಿ ನಾವು ಪ್ರತಿವಾದಿ ಅಲ್ಲ. ಆದರೂ ನಮ್ಮನ್ನು ಸೇರಿಸಿ ಈ ಆದೇಶ ನೀಡಲಾಗಿದೆ’ ಎಂದು ಆಕ್ಷೇಪಿಸಿ ರಿಜಿಸ್ಟ್ರಾರ್‌ ಜನರಲ್‌ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದರು.

ಈ ಅರ್ಜಿಯ ಅನುಸಾರ ಸುಪ್ರೀಂ ಕೋರ್ಟ್‌ ವಿಚಾರಣೆಗೆ ತಡೆಯಾಜ್ಞೆ ನೀಡಿತ್ತು. ಈ ತಡೆಯಾಜ್ಞೆ ತೆರವುಗೊಳಿಸುವಂತೆ ಬಾಲಚಂದ್ರ ದೀಕ್ಷಿತ್‌ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಠಾಕೂರ್ ನೇತೃತ್ವದ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ ಹಾಗೂ ಎಲ್‌.ನಾಗೇಶ್ವರ ರಾವ್‌ ಅವರನ್ನು ಒಳಗೊಂಡ ತ್ರಿಸದಸ್ಯ ಪೀಠವು ಕಳೆದ ತಿಂಗಳ 28ರಂದು ವಿಲೇವಾರಿ ಮಾಡಿದೆ. ಇದರಿಂದಾಗಿ ನ್ಯಾಯಾಂಗ ನಿಂದನೆ ಮೊಕದ್ದಮೆ ವಿಚಾರಣೆ ಪುನಃ ಆರಂಭವಾಗಲಿದೆ.

ಸಂಪುಟದ ನಿರ್ಧಾರವಾಗಿರಲಿಲ್ಲ…
ದೇವಾಲಯವನ್ನು ಮಠದ ಸುಪರ್ದಿಗೆ ವಹಿಸುವ ಮುನ್ನ ಯಡಿಯೂರಪ್ಪ ಅವರು ಸಚಿವ ಸಂಪುಟದಲ್ಲಿ ಈ ವಿಷಯ ಚರ್ಚಿಸಿಲ್ಲ. ಹೀಗಾಗಿ ಒಂದು ವೇಳೆ ನ್ಯಾಯಾಂಗ ನಿಂದನೆ ಮೊಕದ್ದಮೆ ಏನಾದರೂ ತಮ್ಮ ಕೊರಳಿಗೆ ಉರುಳಾದೀತು ಎಂಬುದು ಯಡಿಯೂರಪ್ಪನವರ ಅಂದಾಜು ಎನ್ನಲಾಗಿದೆ.

ಮಾತುಕತೆ ನಡೆದಿಲ್ಲ…
‘ಯಡಿಯೂರಪ್ಪ ಅವರು ಸಂಸದರಾದ ಮೇಲೆ ನಾನು ಅವರನ್ನು ಭೇಟಿಯೇ ಮಾಡಿಲ್ಲ. ಹೀಗಿರುವಾಗ ನಾನು ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದೆ ಎಂಬ ಸುದ್ದಿ ತಪ್ಪು’ ಎಂದು ಹರನಾಥರಾವ್‌ ಮತ್ತಿಕೊಪ್ಪ ತಿಳಿಸಿದರು.

ಈ ಕುರಿತಂತೆ ‘ಪ್ರಜಾವಾಣಿ‘ಗೆ ಪ್ರತಿಕ್ರಿಯಿಸಿದ ಅವರು, ‘ಇದೇ 4ರಂದು ನನ್ನ ಸಂಬಂಧಿಕರ ಮನೆಯಲ್ಲಿ ಸ್ವಾಮೀಜಿ ಅವರನ್ನು ಭೇಟಿ ಮಾಡಿದ್ದೆ. ಈ ರೀತಿಯ ಯಾವುದೇ ಪ್ರಸ್ತಾಪ ನಡೆದಿಲ್ಲ’ ಎಂದು ಉತ್ತರಿಸಿದರು.

source: http://www.prajavani.net/news/article/2016/11/19/453523.html

pv_21112016_b_b_gc20_pg0401

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s