ಗೋಕರ್ಣ ಸಾಧನೆಯ ಹೇಳಿಕೆಗಳು: ಪ್ರತಿಕ್ರಿಯೆಗಳು

ಗೋಕರ್ಣ ಸಾಧನೆಯ ಹೇಳಿಕೆಗಳು: ಪ್ರತಿಕ್ರಿಯೆಗಳು

ಶ್ರೀ ಗೋಕರ್ಣ ಮಹಾಬಲೇಶ್ವರ ದೇವಾಲಯದ ಆಡಳಿತವನ್ನ ರಾಮಚಂದ್ರಾಪುರ ಮಠದ ಸ್ವಾಮ್ಯಕ್ಕೆ ಪಡೆದಮೇಲೆ ಆದ ಬದಲಾವಣೆಗಳನ್ನು ಮಾನ್ಯರು ಹೇಳಿಕೊಂಡಿದ್ದಾರೆ. ಆದರೆ ಅದರ ಹಿಂದಿರುವ ಕೆಲವು ವಾಸ್ತವಗಳು ಹಾಗೂ ಸುಪ್ತ ಉದ್ದೇಶಗಳು ಹೊರಜಗತ್ತಿಗೆ ಕಾಣಿಸುತ್ತಿಲ್ಲ. ಆ ಕಾರಣಕ್ಕಾಗಿ ಅಂಥವನ್ನ ಅವರ ಈ ಕೆಳಗಿನ ಸಾಧನೆಯ ಹೇಳಿಕೆಗಳಿಗೆ ಪ್ರತಿಕ್ರಿಯಿಸುವುದರ ಮೂಲಕ ಸಮಾಜದ ಮುಂದೆ ತೆರೆದಿಡುವ ಪ್ರಯತ್ನಕ್ಕೆ ಮುಂದಾಗುತ್ತೇವೆ……..

ಈ ಕೆಳಗೆ ಮಠದ ಸಮರ್ಥಕರು ಸಾಧನೆಗಳನ್ನ ತೋರ್ಪಡಿಸಿದ್ದಾರೆ, ಅದಕ್ಕೆ ಉತ್ತರಿಸಲು ಪ್ರಯತ್ನಿಸಿದ್ದೇವೆ.

ಗೋಕರ್ಣ ಶ್ರೀ ಮಹಾಬಲೇಶ್ವರ ದೇವಸ್ಥಾನದ ಸದ್ಯದ ಚಿತ್ರಣ
1. ಧಾರ್ಮಿಕ :

 ಶಾಸ್ತ್ರಾಧಾರದಂತೆ ಮತ್ತು ಪೂರ್ವ ಕಾಲದಲ್ಲಿದ್ದ ರೂಢಿ ಪ್ರಕಾರ ದಿನ ನಿತ್ಯದ ಪೂಜೆಯನ್ನು ಮೂರು ಹೊತ್ತಿನ ಬಲಿ, ಪ್ರಾಯಶ್ಚಿತ ಹೋಮದೊಂದಿಗೆ ನಡೆಸಲಾಗುತ್ತದೆ.

-ಪ್ರತಿಕ್ರಿಯೆ- ಈ ಮಠದ ಆಡಳಿತ ಬರುವುದಕ್ಕೂ ಮೊದಲಿಂದಲೂ ಮೂರು ಹೊತ್ತಿನ ಬಲಿ, ಮಹಾಪೂಜೆಗಳು ನಡೆಯುತ್ತಿತ್ತು. ಎಂಥ ಪರಿಸ್ಥಿತಿಯಲ್ಲಿಯೂ ಸೇವೆಗೆ ಲೋಪವಾಗಿರಲಿಲ್ಲ. ಅಲ್ಲದೇ ಯಾವತ್ತೂ ದೇವಸ್ಥಾನದಲ್ಲಿ ವಾತುಲಾಗಮ ರೀತ್ಯಾ ಪೂಜಾದಿ ಕೈಂಕರ್ಯಗಳು ನಡೆದಿವೆ. ಸಾವಿರಾರು ವರ್ಷಗಳಿಂದ ಅರ್ಚಕತನವನ್ನ ನಡೆಸಿಕೊಂಡು ಬಂದ ಕುಟುಂಬದವರನ್ನ ಪ್ರವೇಶಿಸದಂತೇ(ಬಲಿಪೂಜೆಗಾಗಿ) ನಿರ್ಬಂಧ ಹೇರಿದ್ದೀರಿ. ಇದನ್ನ ಯಾವ ಶಾಸ್ತ್ರ ಒಪ್ಪುತ್ತದೆ..? ಅಲ್ಲದೇ ಈಗಿನ ನಿಮ್ಮ ಪ್ರಧಾನ ತಾಂತ್ರಿಕರು ವಾತುಲಾಗಮಿಯಲ್ಲಾ ಬದಲಾಗಿ ಶೈವಾಗಮ ಪಂಡಿತರು. ಅಲ್ಲದೇ ಅನೇಕ (ಅರ್ಚಕ ತನತ ಹಕ್ಕಿಲ್ಲದ) ಆಗಮವಿದ್ಯೆಯಲ್ಲೂ ಸಮರ್ಪಕ ಪ್ರಭುತ್ವವಿಲ್ಲದವರನ್ನ ಬಲಿಪೂಜೆಗೆ ನಿಯೋಜಿಸಿದ್ದೀರಿ, ಇದು ಯಾವರೀತ್ಯಾ ಶಾಸ್ತ್ರಸಮ್ಮತವು.? ಅಲ್ಲದೇ ಇಲ್ಲಿ ಮುಖ್ಯವಾಗಿ ‘ತಂತ್ರಸಂಕರ’ ದ ದೋಷ ಉಂಟಾಗಿದೆ ಅದಕ್ಕಾರು ಹೊಣೆ…?

 ಪ್ರಾಚೀನ ಕಾಲದಲ್ಲಿ ಅಸ್ಥಿತ್ವದಲ್ಲಿದ್ದ ನಂತರದಲ್ಲಿ ಸ್ಥಗಿತಗೊಂಡ ಸ್ವಾತಿ ಉತ್ಸವ, ತದಡಿ ಉತ್ಸವಗಳನ್ನೂ ಶ್ರೀ ಮಠದ ಆಡಳಿತದಲ್ಲಿ ಪುನಃ ಆಚರಣೆಗೆ ತರಲಾಗಿದೆ.

-ಪ್ರ- ಈ ಉತ್ಸವಾದಿಗಳು ದೇವಾಲಯದ ಆಡಳಿತಕ್ಕೂ ಹಾಗೂ ಉತ್ಸವ ನಡೆಸಲಪಡುವ ಸ್ಥಾನಿಕರ ನಡುವಿನ ಸಂಬಂಧದ ವಿಷಯವಾಗಿದ್ದು, ಸ್ಥಗಿತಗೊಂಡಿದ್ದರ ಕಾರಣ ಅರ್ಚಕಾದಿಗಳಲ್ಲ. ಹಾಗೂ ಇಂದು ಸೇವಾಕಾರರಿಂದ ಬೇಕಷ್ಟು ಹಣವನ್ನೂ ಪಡೆದು ಉತ್ಸವ ನಡೆಸುತ್ತಿದ್ದೀರಷ್ಟೇ, ಇದನ್ನ ಸಾಧನೆಯೆಂದುಕೊಳ್ಳಲಾದೀತೇ.?

 ಶ್ರೀ ದೇವಾಲಯದಲ್ಲಿ ಅಂತರ್ಗತವಾಗಿರುವ ಚಿಂತಾಮಣಿ ಗಣಪತಿ ದೇವರಿಗೆ ರಜತ ಕವಚ ಪ್ರಭಾವಳಿ ತೊಡಿಸಲಾಗಿದ್ದು, ನಿತ್ಯವೂ ಪಂಚಾಮೃತ ಅಭಿಷೇಕ ಪೂಜೆಯನ್ನು 2012ರ ಗಣೇಶ ಚತುರ್ಥಿಯಿಂದ ಪ್ರಾರಂಭಿಸಿ ನಡೆಸಲಾಗುತ್ತಿದೆ.

 ಶ್ರೀ ದೇವಾಲಯದಲ್ಲಿ ಅಂತರ್ಗತವಾಗಿರುವ ಶ್ರೀ ದುರ್ಗಾಪರಮೇಶ್ವರಿ ದೇವರಿಗೆ ರಜತ ಕವಚ ತೊಡಿಸಲಾಗಿದ್ದು, ಪೂಜೆ, ಆಭರಣ ಧಾರಣೆಯನ್ನು ಮಾಡಿ ಪ್ರಭಾವಳಿ ತೊಡಿಸಿ ಪ್ರತೀ ಶುಕ್ರವಾರ ವಿಶೇóಷ ಪೂಜೆ ನಡೆಸಲಾಗುತ್ತದೆ.

 ಪ್ರತಿ ಶುಕ್ರವಾರ ದುರ್ಗಾಪರಮೇಶ್ವರಿ ದೇವಿಗೆ ಪಾರಾಯಣ, ವಿಶೇಷ ಪೂಜೆ ನೆರವೇರಿಸಲಾಗುತ್ತಿದೆ.

-ಪ್ರ- ದೇವಾಲಯದ ಆದಾಯದಿಂದ ಆಭರಣಗಳನ್ನು ಮಾಡಿಸಿದ್ದು ಸ್ವಾಗತಾರ್ಹ. ಆದರೆ ಚಿಂತಾಮಣಿ ಗಣಪತಿ ಹಾಗೂ ಅಮ್ಮನವರಲ್ಲಿ ಈ ಹಿಂದೆ ಎಂದೂ ಸೇವಾಲೋಪವಾಗಿದ್ದಿಲ್ಲ. ಪ್ರತಿನಿತ್ಯ ಶಿವನ ಪೂಜೆಗೆ ಬರುವ ಸ್ಥಳೀಯರು ಈ ಎರಡೂ ದೇವರಿಗೆ ಪಂಚಾಮೃತ ಅಭಿಷೇಕಾದಿಗಳನ್ನ ಮಾಡಿಯೇ ಹೋಗುತ್ತಿದ್ದರು. ಆದರೆ ಇಂದು ಅವಕ್ಕೆ ಆಭರಣ ಹಾಕಿ, ಬಾಗಿಲು ಬೀಗ ಹಾಕಿ ಊರಿನವರಿಗೂ ಪೂಜೆಗೆ ಪ್ರವೇಶವಿಲ್ಲದಂತೇ ಬದಲಾವಣೆಗೈದಿದ್ದೀರಿ. ಇದು ಉಚಿತವೇ..?
ನಿತ್ಯವೂ ನೂರಾರು ಪಂಚಾಮೃತ ಸೇವೆ ನಡೆಯುತ್ತಿದ್ದದ್ದನ್ನ ತಪ್ಪಿಸಿ ಒಂದೇ ಸೇವೆ ನಡೆದರೆ ಅದು ಸ್ವಾಗತಾರ್ಹವೇ.?

 ನಿತ್ಯ ಮಹಾಪೂಜೆಗೆ ಶುದ್ಧವಾದ ಗೋಕ್ಷೀರ, ನವಧಾನ್ಯ, ಎಳೆನೀರು ಮತ್ತು ಗಂಗಾಜಲಗಳಿಂದ ಶ್ರೀ ದೇವರಿಗೆ ಅಭಿಷೇಕ ಮಾಡಲಾಗುತ್ತಿದೆ.

-ಪ್ರ- ಮತ್ತದೇ ಪುನರಾವರ್ತನೆ. ಎಂದಿಗೂ ಕೂಡಾ ಇಲ್ಲಿನ ಅರ್ಚಕರು ಮಹಾಪೂಜೆಗೆ ಬರುವಾಗ ತಮ್ಮತಮ್ಮಯ ಮನೆಗಳಿಂದ ಶುದ್ಧ ದೇಶೀಯ ಗೋಕ್ಷೀರವನ್ನ ಹಾಗೂ ಶುದ್ಧಮಡಿಯಲ್ಲಿಯೇ ನೆರವಾದ ಮೊಸರು ಹಾಗೂ ಇನ್ನಿತರ ಅಭಿಷೇಕ ದ್ರವ್ಯಗಳನ್ನ ತರುತ್ತಿದ್ದರು. ಆದರೆ ಇಂದು ನೋಡಿದರೆ ಮಹಾಪೂಜೆಗೆ ನೀಡಲ್ಪಡುವ ಮೊಸರು ಖಂಡಿತಾ ಮಡಿಯದ್ದಲ್ಲಾ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲಾ ಯಾಕೆಂದರೆ ಆಫೀಸಿನಲ್ಲಿ ಶ್ರೇಖರಿಸಿಟ್ಟ ಯಾತ್ರಾರ್ಥಿಗಳಿಗೆ ಕೊಡಮಾಡುವದನ್ನೇ ಕೊಡುತ್ತಾರಷ್ಟೇ. ಇದೆಲ್ಲಿಯ ಶಾಸ್ತ್ರ ಒಪ್ಪಿತ ಸೇವೆ..?

 ಶ್ರೀ ದೇವರಿಗೆ ನೈವೇದ್ಯ ಮಾಡುತ್ತಿದ್ದ ಅನ್ನದ ಚರಿಗೆಯ ಸಂಖ್ಯೆಯನ್ನು 16ಕ್ಕೆ ಏರಿಸಲಾಗಿದೆ.

-ಪ್ರ- ಚರಿಗೆಯನ್ನ ಒಂದಾಗಲಿ, ಐದಾಗಲೀ ಅಥವಾ ಹತ್ತಾಗಲೀ, ಖಂಡಿತ ವಿಶೇಷವೂ, ವ್ಯತ್ಯಾಸವೂ ಯಾವುದರಲ್ಲಿಯೂ ಇರಲಾರದು.

 ಉತ್ಸವಗಳಲ್ಲಿ ಬಳಸುವ ಛತ್ರಿ-ಚಾಮರ, ಪಕ್ಕೆ-ಪರಾಕು ಬಿರುದು ಬಾವಲಿಗಳನ್ನು ರೇಷ್ಮೆಕುಸುರಿಯಿಂದ ಹೊಸದಾಗಿ ಮಾಡಿಸಲಾಗಿದ್ದು ಅವುಗಳನ್ನು ಉತ್ಸವ ಕಾಲದಲ್ಲಿ ಬಳಸಲಾಗುತ್ತಿದೆ.

-ಪ್ರ- ಈ ಹಿಂದೆ ಬಳಸುತ್ತಿದ್ದ ಛತ್ರ, ಚಾಮರ, ಪಕ್ಕೆ-ಪರಾಕು ಗಳೆಲ್ಲಾ ರೇಷ್ಮೆ ಹಾಗೂ ಹಳೇಯ ಸುಂದರವಾದ ಕೈಕುಸುರಿಯ ಕೆಲಸಗಳಿಂದ ಆಗಿದ್ದಿತ್ತು, ಅಲ್ಲದೇ ಸರಿಯಾಗಿಯೂ ಇತ್ತು. ಹಾಗೂ ಚಿನ್ನದ ಕೆಲಸವೂ ಇತ್ತು. ಈಗ ಹೊಸದು ಮಾಡಿಸಿದ್ದರ ಅನಿವಾರ್ಯತೆಯೇನೂ ಇಲ್ಲವಾಗಿತ್ತು. ಹಾಗೂ ಅದರ ಹಿಂದೆ ಅವ್ಯವಹಾರದ ವಾಸನೆಯೇ ತೋರುತ್ತಿದೆಯಲ್ಲವೇ.?

 ಮಹಾಶಿವರಾತ್ರಿಯನ್ನು ಪರಮಪೂಜ್ಯ ಶ್ರೀ ಶ್ರೀಗಳವರ ದಿವ್ಯ ಮಾರ್ಗದರ್ಶನದಲ್ಲಿ ಹಾಗೂ ಸಾನಿಧ್ಯದಲ್ಲಿ ಮಹೋತ್ಸವವನ್ನಾಗಿ ವಿಜ್ರಂಭಣೆಯಿಂದ ಆಚರಿಸಲಾಗುತ್ತಿದ್ದು ಸ್ಥಳೀಯ ಕಲಾವಿದರುಗಳಿಗೆ ಪ್ರೋತ್ಸಾಹ ನೀಡುತ್ತಿರುವ 9 ದಿನಗಳ ಸಾಸ್ಕøತಿಕ ಹಾಗೂ ಧಾರ್ಮಿಕ ಹಬ್ಬವಾಗಿದೆ.

-ಪ್ರ- ಗೋಕರ್ಣ ಮಹಾಬಲೇಶ್ವರ ನ ವಾರ್ಷಿಕ ಮಹಾರಥೋತ್ಸವವು ಯಾವತ್ತೂ ಒಂಭತ್ತು ದಿನಗಳ ಭವ್ಯವಾದ ದೈವೀಕೋತ್ಸವವೇ (ಆಗಮ ಶಾಸ್ತ್ರ ರೀತ್ಯಾ ಒಂಭತ್ತು ದಿನಗಳ ಉತ್ಸವಕ್ಕೆ ದೈವೀಕೋತ್ಸವ ಎನ್ನುತ್ತಾರೆ) ಆಗಿತ್ತು ಹಾಗೂ ಮತ್ತೊಮ್ಮೆ ಹೇಳುವುದಾದರೆ ಎಂದಿಗೂ ಯಾವ ಸೇವೆಯೂ ಕಡಿಮೆಯಾಗಲಿಲ್ಲ. ಸಾಂಸ್ಕೃತಿಕ ಕಾರ್ಯಕ್ರಮಗಳು ಈ ಉತ್ಸವದಲ್ಲಿ ಅವಶ್ಯವೇ ಇಲ್ಲಾ. ಆದರೂ ಇವರು ಅಗತ್ಯಕ್ಕಿಂತ ದೊಡ್ಡ ಪ್ರಮಾಣದಲ್ಲಿ ಕಾರ್ಯಕ್ರಮವನ್ನ ಆಯೋಜನೆ ಮಾಡಿ ಲಕ್ಷಾಂತರ ರೂಪಾಯಿ ಹಣವನ್ನ ನಷ್ಟ ಎಂದು ಹೇಳಿಕೊಂಡಿದ್ದೇ ಇದೆ. ಆ ನಷ್ಟ ನೇರವಾಗಿ ಶ್ರೀ ದೇವರ ಭಂಡಾರಕ್ಕೇ ಅಲ್ಲವೇ..? ಬೇಕಿತ್ತೇ ಇಂಥ ಸಾಂಸ್ಕೃತಿಕ ಕಾರ್ಯಗಳು….?

 ಜಗದೀಶ್ವರನ ಸಾನಿಧ್ಯದಲ್ಲಿ “ಕೋಟಿರುದ್ರ” ಸೇವಾ ಸಮರ್ಪಣೆ ನಿರಂತರವಾಗಿ ಸಾಗುತ್ತಿದೆ.

-ಪ್- ಪ್ರಥಮವಾಗಿ ಕೋಟಿರುದ್ರ ಎಂಬುದೇ ಅಶಾಸ್ತ್ರೀಯ. ಆದರೂ ಇರಲಿದೊಡ್ಡ ಸೇವೆ ನಡೆಯುತ್ತದೆ ಎಂದುಕೊಳ್ಳೋಣ. ಆದರೆ ನೀವು ಹೇಳಿಕೊಂಡಿದ್ದು ಒಂದೇ ವರ್ಷದೂಲ್ಲಿ ಮುಗಿಸುವುದಾಗಿ, ಒಂದು ವರ್ಷದಲ್ಲಿ ಹತ್ತನೇ ಒಂದರಷ್ಟೂ ಆಗಿಲ್ಲ. ಕುಂಟುತ್ತಾ ಕುಂಟುತ್ತಾ ಬಂದು ಆರೇಳು ವರ್ಷಕಳೆದರೂ ಅರ್ಧವೂ ಆಗಿಲ್ಲವೆಂಬುದು ಅದರ ಅಸಮರ್ಪಕ ನಿರ್ವಹಣೆಯ ಫಲವಲ್ಲವೇ..? ಅದರಲ್ಲಿ ಪಾಲ್ಗೊಂಡವರಿಗೆ ಐದಾರು ತಿಂಗಳಾದರೂ ಗೌರವ ಸಂಭಾವನೆ ಸಲ್ಲಿಕೆಯಾಗದೇ ರುದ್ರಕ್ಕೆ ಹೋಗುವುದನ್ನ ಬಿಟ್ಟವರು ಹಲವರು ಎಂಬುದು ಇಡೀ ಊರಿಗೇ ಗೊತ್ತು.. ಇನ್ನು ಇಂಥಾ ನಾಚಿಕೆಯ ವಿಷಯ ಇದಾಗಿದ್ದರೂ ಇದನ್ನ ಬೆನ್ನು ತಟ್ಟಿಕೊಂಬಂತೇ ಹೇಳಿಳ್ಳುತ್ತೀರಲ್ಲಾ.. ಇದು ಚೆಂದವೇ.,?

2. ವಾತಾವರಣ :

 ಶ್ರೀ ದೇವಾಲಯದಲ್ಲಿ ಶಾಂತಿ, ಸುಗಮ ದರ್ಶನ ಇವುಗಳಿಗೆ ಆದ್ಯತೆ ನೀಡಲಾಗಿದೆ.

-ಪ್ರ- ಮೊದಲಿಂದಲೂ ಇತ್ತು. ಅಶಾಂತಿ ಇರಲಿಲ್ಲ..

 ಗರ್ಭಗುಡಿಯಲ್ಲಿ ಕರ್ಪೂರದ ಆರತಿಯನ್ನು ನಿಷೇಧಿಸಲಾಗಿದ್ದು, ನಂದಿ ಮಂಟಪದಲ್ಲಿ ಶಾಸ್ತ್ರೀಯವಾದ ದೀಪದಿಂದ ಆರತಿ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದ್ದು ಗರ್ಭಗುಡಿಯ ವಾತಾವರಣವನ್ನು ಹೊಗೆರಹಿತವಾಗಿಸಿದೆ.

-ಪ್ರ- ಇದು ನಿಮ್ಮ ಕಲ್ಪನೆಯಷ್ಟೇ ಅಲ್ಲ, ಶಿಲಾಮಯ ದೇವಾಲಯದಲ್ಲಿ ಕರ್ಪೂರ ದೀಪ ಹಚ್ಚಬಾರದು ಅದರಿಂದ ಶಿಲೆಯ ಆರೋಗ್ಯಕ್ಕೆ ಹಾನಿಯಾಗುತ್ತದೆ ಎಂದು ಪ್ರಾಚ್ಯವಸ್ತು ಇಲಾಖೆಯೇ ಎಂದೋ ಹೇಳಿದೆ ಹಾಗೂ ಎಲ್ಲಾ ದೇವಾಯಲಗಳಲ್ಲಿ ಜಾರಿಗೆ ತರುವಂತೆ ಆದೇಶಿಸಿದೆ. ಇದರಿಂದ ಜನರಿಗೂ ಅನುಕೂಲ.

 ಪೂರ್ವಾವಧಿಯಲ್ಲಿ ಭಕ್ತರಿಂದ ದರ್ಶನಕ್ಕಾಗಿ ಶುಲ್ಕ ವಸೂಲಾತಿ ಮಾಡಲಾಗುತ್ತಿತ್ತು ಶ್ರೀ ಮಠದ ಆಡಳಿತದಲ್ಲಿ ಶುಲ್ಕ ವಸೂಲಾತಿ ಪದ್ಧತಿಯನ್ನು ರದ್ದುಪಡಿಸಲಾಗಿದ್ದು ಗರ್ಭಗುಡಿ ಪ್ರವೇಶಿಸಿ ಆತ್ಮಲಿಂಗದ ಸ್ಪರ್ಶದರ್ಶನ ಪಡೆದುಕೊಳ್ಳಲು ಧರ್ಮದರ್ಶನದ ಅವಕಾಶ ನೀಡಲಾಗಿದೆ. ಆರ್ಥಿಕವಾಗಿ ಹಿಂದುಳಿದವರು, ಕೈಯಲ್ಲಿ ಬಿಡಿಗಾಸು ಇಲ್ಲದವರು ಕೂಡಾ ಉಚಿತವಾಗಿ ದೇವರ ದರ್ಶನ ಪಡೆಯಲು ಅವಕಾಶ ಕಲ್ಪಿಸಿರುವುದು ಸಮಾಜಮುಖಿಯಾದ ಬಹುದೊಡ್ಡ ಸಾಧನೆ. ಕಟ್ಟಕಡೆಯ ಬಡವನೂ ಕೂಡ ಆತ್ಮಲಿಂಗವನ್ನು ಸ್ಪರ್ಶಿಸುವ, ಸ್ಪರ್ಶಿಸಿ ಧನ್ಯತಾಭಾವ ಹೊಂದುವ ಶಿವ ಸಂಪ್ರೀತಿ ತನಗೆ ಲಭಿಸಿತೆಂಬ ಮನಃಶಾಂತಿಯನ್ನು ಪಡೆಯಬಹುದೆಂಬ ಪರಮಪೂಜ್ಯರ ಆಶಯವನ್ನು ಸಾಕಾರಗೊಳಿಸಲಾಗಿದೆ.

 ವಿವಿಧ ಪೂಜೆ ಅಭಿಷೇಕಗಳಿಗೆ ದರವನ್ನು, ಪರಿಕರ ಮತ್ತು ದಕ್ಷಿಣೆಯ ಒಟ್ಟೂ ಶುಲ್ಕವನ್ನು ಒಳಗೂಂಡಂತೆ ನಿಗದಿಪಡಿಸಿ ಏಕರೂಪತೆಯನ್ನು ಕಾಯ್ದುಕೊಂಡು ಸೇವಾರ್ಥಿಗಳಿಗೆ ಸಾಮಾಜಿಕ ನ್ಯಾಯ ಒದಗಿಸಲಾಗಿದೆ.

-ಪ್ರ- ಮೊದಲಿನ ಪ್ರವೇಶ ಶುಲ್ಕ 50ಪೈಸೆಯನ್ನ ರದ್ದುಗೊಳಿಸಿ ಮೇಲ್ನೋಟಕ್ಕೆ ನೇರ ಧರ್ಮದರ್ಶನ ಅವಕಾಶ ಕಲ್ಪಿಸಿದ್ದೀರಿ ಎಂಬುದು ಒಂದಾದರೆ ಅದರ ಬೆನ್ನಲ್ಲೇ ಸಾಮಾನ್ಯರಿಗೆ ಹೊರೆಯೇ ಆಗಬಲ್ಲಂಥ ಅನೇಕ ಸೇವಾ ಶುಲ್ಕಗಳನ್ನು ಸೃಷ್ಟಿಸಿದ್ದೀರಿ. ಹಳೆಯ ಸೇವಾ ದರವಿವರ, ಅಥವಾ ದಕ್ಷಿಣ ಕರ್ನಾಟಕದ ಅನೇಕ ದೇವಾಲಯಗಳ ಸೇವಾವಿವರಗಳನ್ನ ನೋಡಿದರೆ ಇಂದು ನೀವು ನಿಗದಿಮಾಡಿಟ್ಟಿದ್ದು ಖಂಡಿತ ಆರ್ಥಿಕ ದುರ್ಬಲರ ಮೇಲೆ ಬರೆ ಹಾಕಿದಂತಿದೆ. ಒಂದು ಉದಾಹರಣೆ ನೋಡುವುದಾದರೆ: ಮೊದಲು ಒಂದು ಪಂಚಾಮೃತ ಸೇವೆಗೆ ಗರಿಷ್ಟ ಐದು ರೂಪಾಯಿ ಪಾವತಿಯಿತ್ತು. ಅರ್ಚಕರು ತಾವೇ ಆ ದ್ರವ್ಯಗಳನ್ನ ತಂದು ಸೇವೆ ಮಾಡಿಸಿಕೊಡುತ್ತಿದ್ದರು. ಭಕ್ತನಾದರೋ ಅರ್ಚಕರಿಗೆ ಹೆಚ್ಚೆಂದರೆ ನೂರೈವತ್ತು ರೂಪಾಯಿಗಳನ್ನ ಕೊಡುತ್ತಿದ್ದ, ಅದು ಸಾಕಾಗಿತ್ತು ಕೂಡಾ. ಆದರೆ ಇಂದು ಪರಿಕರ, ದಕ್ಷಿಣೆಯ ಒಟ್ಟೂ ಶುಲ್ಕಾ ಎಂದು 250 ರಿಂದ 300 ರ ವರೆಗೆ ಪಾವತಿಸಬೇಕು, ಇದು ಬಡವರಾಗಲೀ ಇಲ್ಲಾ ಧನಿಕನಾಗಲೀ ಆರೋಗ್ಯಕರವಲ್ಲಾ ಅಲ್ಲವೇ,?
ಇದು ಎಲ್ಲಾ ಸೇವೆಗಳ ವಿಷಯದಲ್ಲಿಯೂ ಅನ್ವಯ.
ಇದು ಸಮಂಜಸವೇ ಮಹಾಪ್ರಭೂ.. ..?

 ಭಕ್ತಾದಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲವಾಗಿತ್ತು. ಈ ಮೂರು ವರ್ಷಗಳಿಂದ ಭಕ್ತಾದಿಗಳಿಗೆ ತಂಪಾದ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

-ಪ್ರ- ಈ ಮೊದಲೇ ಬ್ರಾಹ್ಮಣ ಪರಿಷತ್ ವತಿಯಿಂದ ಕುಡಿಯುವ ನೀರಿನ ವ್ಯವಸ್ಥೆ ಇತ್ತು. ದೇವಾಲಯದ ಒಳ ಪ್ರಾಕಾರದಲ್ಲಿ ಮಾಡಿದರೆ ಶಾಸ್ತ್ರ ರೀತ್ಯಾ ಅಷ್ಟೊಂದು ಉಚಿತವಾಗಲಾರದು ಎಂದು ಹೊರಗೆ ಮಾಡಿದ್ದರು. ಆದರೆ ಈಗ ಇವರು ಒಳಗೇ ಮಾಡಿದ್ದಾರಷ್ಟೇ.
 ಭಕ್ತಾದಿಗಳು ದೇವರ ದರ್ಶನಕ್ಕಾಗಿ ಹೋಗುವ ಸರದಿಸಾಲಿನಲ್ಲಿ ಫ್ಯಾನ್ ಗಳನ್ನು ಅಳವಡಿಸಲಾಗಿದ್ದು ಹಿತಕರವಾಗಿ ಪರಿಣಮಿಸಿದೆ.

 ಗರ್ಭಗುಡಿಯ ಒಳಗೆ ಹೋಗಿ ಕಿರಿದಾದ ಮಾರ್ಗದಲ್ಲಿ ಹೊರಟು ಬರುವಾಗ ಕರಾವಳಿ ಪ್ರದೇಶವಾದ ಇಲ್ಲಿನ ವಾತಾವರಣದ ಶಾಖ, ಭಕ್ತಾದಿಗಳ ಉಸಿರಿನ ಒತ್ತಡ ಇವುಗಳಿಂದ ಭಕ್ತಾದಿಗಳಿಗೆ ತೊಂದರೆಯಾಗುತ್ತಿತ್ತು. ಇದನ್ನು ನಿವಾರಿಸಿ ಭಕ್ತಾದಿಗಳಿಗೆ ಹಿತ ಅನುಭವವನ್ನು ಉಂಟುಮಾಡುವುದಕ್ಕಾಗಿ ಗರ್ಭಗುಡಿಗೆ ಹವಾನಿಯಂತ್ರಕವನ್ನು ಅಳವಡಿಸಲಾಗಿದೆ. ಇದು ಗರ್ಭಗುಡಿಯಲ್ಲಿ ತಂಪಾದ ಆಹ್ಲಾದಕರ ವಾತಾವರಣವನ್ನು ಉಂಟುಮಾಡಿದೆ.

-ಪ್ರ- ಪ್ರಾಚ್ಯವಸ್ತು ಸಂರಕ್ಷಣಾ ಇಲಾಖೆಯ ತಜ್ಞರ ಅಭಿಪ್ರಾಯದಂತೇ ಹವಾನಿಯಂತ್ರಕದ ಗಾಳಿಯಿಂದ ಹಾಗೂ ರಾಸಾಯನಿಕದಿಂದ ಶಿಲಾ ದೇವಾಲಯಕ್ಕೆ ಹಾನಿಯಾಗುತ್ತದೆ ಎಂಬುದಾಗಿದೆ. ಅದನ್ನ ಮೀರಿ ಮಾಡಿದ್ದು ಸಾಧನೆಯಲ್ಲಾ ಮಾರಕವಾಗುತ್ತದೆಯಲ್ಲವೇ.?

3. ಭೌತಿಕ ಬೆಳವಣಿಗೆಗಳು :

 ಶ್ರೀ ದೇವಾಲಯದಲ್ಲಿ ಜನ ನಿಬಿಡತೆಯ ನಡುವೆಯೂ ಶುಚಿತ್ವ ಸ್ವಚ್ಛತೆ ಕಾಪಾಡಲಾಗಿದೆ.

-ಪ್ರ- ಮಾಡಲೇಬೇಕಾದದ್ದೂ . ಅದನ್ನೂ ಸಾಧನೆ ಎಂದುಕೊಳ್ಳುವುದಾದರೆ ನೀವು ಯಾವ ಮಟ್ಟದಲ್ಲಿದ್ದೀರೆಂದು ತಿಳಿಯಬಹುದು,.

 ಗರ್ಭಗುಡಿಯಲ್ಲಿ ಆತ್ಮ ಲಿಂಗದ ಸುತ್ತ ಬೆಳ್ಳಿ ಕವಚವನ್ನು ಕೂಡ್ರಿಸಿ ಅದರ ಶೋಭೆಯನ್ನು ಹೆಚ್ಚಿಸಲಾಗಿದೆ.

 ಪಾಣಿ ಪೀಠಕ್ಕೆ ಹಾಗೂ ದರ್ಶನದ ಸಾಲಿಗೆ ಹಿತ್ತಾಳೆ ರೇಲಿಂಗ್ ನಿರ್ಮಿಸಲಾಗಿದೆ.

 ಗರ್ಭಗುಡಿಗೆ ಸುಮಾರು 70ಲಕ್ಷ ರೂ. ವೆಚ್ಚದಲ್ಲಿ ರಜತ ಮಹಾದ್ವಾರ ನಿರ್ಮಿಸಲಾಗಿದ್ದು ಇದನ್ನು ಶ್ರೀ ಶ್ರೀಗಳವರು 2012 ರಲ್ಲಿ ಲೋಕಾರ್ಪಣೆಗೊಳಿಸಿದ್ದಾರೆ.

 ನಂದಿ ಮಂಟಪದಲ್ಲಿ ವಿಸ್ತಾರವಾದ ರಜತ ಮಹಾದ್ವಾರದ ಮೊದಲ ಹಂತ 70 ಲಕ್ಷ ರೂ. ವೆಚ್ಚದಲ್ಲಿ ಮುಕ್ತಾಯವಾಗಿದೆ.

-ಪ್ರ- ರಜತದ್ವಾರ , ಕವಚಗಳ ನಿರ್ಮಾಣಕ್ಕಾಗಿ ವರ್ಷಗಟ್ಟಲೆ ಯಾತೂರಾರ್ಥಿಗಳಿಂದ ದೇಣಿಗೆ ವಸೂಲಾತಿ ನಡೆದಿತ್ತು. ಅಲ್ಲಿಯ ಕೂಪನ್ ವಿಷಯದಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂದು ನಿಮ್ಮ ಒಳಗಿನವರಲ್ಲೇ ಗುಸುಗುಸು ಕೇಳಿತ್ತು ಹೌದಲ್ಲವೇ.? ಆ ಲೆಕ್ಕಗಳನ್ನ ಆ ಆರೋಪಿ ಸಮರ್ಪಕವಾಗಿ ಕೊಟ್ಟರೇ.? ಮೊದಲು ಇದು ಬಗೆ ಹರಿಯಲೀ..

 ನಾಣ್ಯಾಭಿಷೇಕಕ್ಕಾಗಿ ಬೆಳ್ಳಿಯ ಹಾಗೂ ಬಂಗಾರದ ನಾಣ್ಯಗಳನ್ನು ಖರೀದಿಸಿದ್ದು ಇದು ಆಭರಣದ ಭಂಡಾರವನ್ನು ವೃದ್ದಿಗೊಳಿಸಿದೆ.

 ಶ್ರೀ ದೇವಾಲಯದ ಹೊರ ಆವರಣದಲ್ಲಿ ಬಲಿ ಪೂಜೆಯ ಅರ್ಚಕರು, ದರ್ಶನಕ್ಕಾಗಿ ನಿಲ್ಲುವ ಭಜಕರು ಮಳೆ ಬಿಸಿಲಿನಲ್ಲಿ ನಿಲ್ಲಬೇಕಾದ ದುರ್ಬರ ಪ್ರಸಂಗವನ್ನು ಹೊರ ಆವರಣದಲ್ಲಿ ಸ್ಟೀಲ್ ಚಪ್ಪರ ನಿರ್ಮಾಣದ ಮೂಲಕ ನಿವಾರಣೆ ಮಾಡಲಾಗಿದೆ.

 ಒಳ ಆವಾರದ ಬಲಿ ಕಲ್ಲುಗಳ ಮೇಲೆ ಜನರು ಕೂಡ್ರದಂತೆ, ಮುಟ್ಟದಂತೆ ಕಟಾಂಜನ ನಿರ್ಮಿಸಲಾಗಿದೆ.

 ಶ್ರೀದೇವರ ನೈವೇದ್ಯ ತಯಾರಿ ಕೋಣೆಯನ್ನು ನವೀಕರಿಸಲಾಗಿದೆ.

 ಪರಮಪೂಜ್ಯರ ಆಶೀರ್ವಾದಗಳಿಂದ ಕೆಲ ಆಸ್ತಿಕ ಮಹನೀಯರಿಂದ ಚಿನ್ನದ ಶಂಖ, ಬೆಳ್ಳಿಯ ಆರತಿ ಇತ್ಯಾದಿ ವಿಶೇಷ ಆಭರಣಗಳನ್ನು ಹಾಗೂ 63ಞv ಜನರೇಟರ್ ಇವುಗಳನ್ನು ಪಡೆಯಲು ಸಾಧ್ಯವಾಗಿದೆ.

-ಪ್ರ- ಸ್ವಾಗತಾರ್ಹ.

 ಶ್ರೀದೇವರ ಆಭರಣಗಳನ್ನು ಜೋಪಾನವಾಗಿಡಲು ‘ಭದ್ರತಾ ಕೊಠಡಿ’ ನಿರ್ಮಿಸಲಾಗಿದೆ.

-ಪ್ರ- ಭದ್ರತಾ ಕೊಠಡಿಯೇ..? ಅವಶ್ಯವಿತ್ತೇ,.?
ಹಾ ಹಾ ಹಾ ಖಂಡಿತಾ ಬೇಕೇಬೇಕು. ಸೆಕ್ಯೂರಿಟಿ ಗಾರ್ಡ್ಸ್, ಸಿ ಸಿ ಕ್ಯಾಮರಾ ಮುಂತಾದವುಗಳಿದ್ದೂ ದೇವಾಲಯದ ಒಳಗಿದ್ದ ಕಾಣಿಕೆ ಹುಂಡಿಯೇ ಕಳುವಾಗಿತ್ತಲ್ಲ, ಅಂಥಾ ನಿಮ್ಮ ಬೇ’ಜವಾಬ್ದಾರಿ’ ಯನ್ನ ನೋಡಿದಮೇಲೆ ಪೋಲೀಸರು ಜಾಢಿಸಿದಮೇಲೆ ಭದ್ರತಾ ಕೊಠಡಿ ನಿರ್ಮಿಸಬೇಕಾದದ್ದೇ ಅಲ್ಲವೇ…?

 ಶ್ರೀ ದೇವಾಲಯದ ಮಹಾರಥದ ಗಾಲಿ, ಎಳೆಗಳನ್ನು ಹೊಸದಾಗಿ ನಿರ್ಮಿಸಲಾಗಿದ್ದು ರಥೋತ್ಸವ (2015) ಸುಸಂಪನ್ನಗೊಂಡಿದೆ.

-ಪ್ರ- ಇದನ್ನ ಮಾಡಿಸಿದ್ದು ಹೆಗ್ಗಳಿಕೆಯೇ,?
ಒಂದು ಮನೆಯ ಹಂಚು ಒಡೆದು ಮನೆ ಸೋರುತ್ತಿದ್ದರೆ ಮನೆಯೊಡೆಯ ಅದನ್ನ ರಿಪೇರಿ ಮಾಡಿಸಬೇಕಾದದ್ದು ಅತ್ಯನಿವಾರ್ಯ ಅಥವಾ ಕರ್ತವ್ಯವಲ್ಲವೇ.? ಹಾಗೆಯೇ ಮತ್ತದೇ ನಿಮ್ಮ ಜಾಣಕುರುಡಿನಿಂದ ರಥದ ಲೀವರ್ ತುಂಡಾಗಿ ಅರ್ಧಕ್ಕೇ ರಥ ನಿಂತಿದ್ದ ಅಪಶಕುನವನ್ನ ಎದುರಿಸಿದ್ದೀರಿ, ಅದನ್ನ ರಿಪೇರಿ ಮಾಡಿಸದಿದ್ದರೆ ಮರುವರ್ಷ ರಥವನ್ನ ಎಳೆಯಲೇ ಆಗುತ್ತಿರಲಿಲ್ಲ. ಆದಕಾರಣ ಆಡಳಿತ ಜವಾಬ್ದಾರಿಯನ್ನು ಹೊತ್ತ ನೀವು ದುರಸ್ತಿ ಮಾಡಲೇಬೇಕು. ಅದನ್ನ ಹೆಗ್ಗಳಿಕೆಂತೇ ಹೇಳಿಕೊಂಡರೆ ಬಾಲಿಷವೆನ್ನಬೇಕಾಗುತ್ತದೆ ತಿಳಿಯಿತೇ…?

4. ‘ಅಮೃತಾನ್ನ’

 “ಅಮೃತಾನ್ನ “ಪ್ರಸಾದ ಭೋಜನವನ್ನು ಬಂದಂತಹ ಎಲ್ಲಾ ಭಕ್ತಾದಿಗಳಿಗೆ ಮಧ್ಯಾಹ್ನ ಮತ್ತು ಸಾಯಂಕಾಲ ಎರಡೂ ಹೊತ್ತು ಉಚಿತವಾಗಿ ವಿತರಿಸುತ್ತಿರುವುದು, ಎರಡೂ ಹೊತ್ತು ಪ್ರಸಾದ ಭೊಜನವನ್ನು ವಿತರಿಸುವುದು ಜಿಲ್ಲೆಯಲ್ಲಿ ಪ್ರಥಮ. ಅತ್ಯಾಧುನಿಕ ಬಾಯ್ಲರ್ ವ್ಯವಸ್ಥೆ, ಸುಸಜ್ಜಿತ ಪಾತ್ರೆಗಳು ಇವುಗಳಿಂದ ನಿತ್ಯವೂ ಸಾವಿರಕ್ಕಿಂತ ಹೆಚ್ಚು ಆಗಾಗ ಐದು ಸಾವಿರಕ್ಕೂ ಅಧಿಕ ಪ್ರವಾಸಿಗರಿಗೆ ಪ್ರಸಾದ ಭೋಜನವನ್ನು ವಿತರಿಸಲಾಗುತ್ತಿದೆ.

 ಪ್ರವಾಸಿಗರು, ಯಾತ್ರಿPರು, ಭಕ್ತಾದಿಗಳು, ಶಾಲಾ ಪ್ರವಾಸಕ್ಕೆ ಬರುವ ವಿದ್ಯಾರ್ಥಿಗಳು ಹೀಗೆ ಈವರೆಗೆ ಸುಮಾರು 40 ಲಕ್ಷಕ್ಕೂ ಅಧಿಕ ಭಕ್ತಾದಿಗಳು ಶ್ರೀ ದೇವರ ಪ್ರಸಾದ ಭೋಜನ ಸ್ವೀಕರಿಸಿದ್ದಾರೆ.

-ಪ್ರ- ಈ ಮೊದಲೇ ಶ್ರೀಕ್ಷೇತ್ರ ಬ್ರಾಹ್ಮಣ ಪರಿಷತ್ತಿನ ವತಿಯಿಂದ ಯಾತ್ರಾರ್ಥಿಗಳಿಗೆ ಪ್ರಸಾದ ಭೋಜನ ವ್ಯವಸ್ಥೆ ಇತ್ತು. ಅಲ್ಲದೇ ಅದರ ನೂತನ ಭವನದ ಶಿಲಾನ್ಯಾಸವನ್ನ ಇದೇ ಶ್ರೀ ಗಳು ನೆರವೇರಿಸಿದ್ದು ಅವರೂ ಈ ಭೋಜನ ವ್ಯವಸ್ಥೆಯ ಬಗೆಗೆ ಶ್ಲಾಘಿಸಿದ್ದು ಸಾಕ್ಷಿಯಾಗಿದೆ. ಅಮೃತಾನ್ನ ಭೋಜನಾಲಯದ ಪಕ್ಕದಲ್ಲೇ ಸಂಗಮ ನೀರು ಹರಿಯುತ್ತಿದ್ದು ಅದರಲ್ಲಿ ಅನೇಕ ಹೊಲಸು ಸೇರಿಕೊಂಡು ಶುಚಿಗೆಟ್ಟಿದೆ ಅಲ್ಲದೇ ಈ ಅಮೃತಾನ್ನದ ಹೆಚ್ಚುವರಿ ಅನ್ನ, ಪದಾರ್ಥಗಳನ್ನೂ ಅದರಲ್ಲಿ ಚೆಲ್ಲುವುದರಿಂದ ಸುತ್ತಮುತ್ತಲಿನವರಿಗೆ ಅಷ್ಟೇಯಾಕೆ ಅಮೃತಾನ್ನ ಉಣ್ಣುವ ಭಕ್ತರಿಗೂ ಮೂಗು ಮುಚ್ಚಿಕೊಂಬ ಸ್ಥಿತಿಯಿದೆ. ಅಲ್ಲದೇ ಆ ಕಾರಣದಿಂದ ಅಲ್ಲಿಯ ನೀರು ಅನಾರೋಗ್ಯಕಾರಕವಾಗಿದ್ದು ಪರಿಣಾಮ ಅನೇಕರ ಮೇಲೆ ಆಗಿದೆ.

4. ಸಾಮಾಜಿಕ :

 ಶ್ರೀ ದೇವಾಲಯದ ವತಿಯಿಂದ ಸ್ಥಳೀಯ ಬಡ ವಿದ್ಯಾರ್ಥಿಗಳಿಗೆ ಧನ ಸಹಾಯ ಮಾಡಲಾಗುತ್ತಿದೆ. ಪರಮಪೂಜ್ಯರ ಅನುಗ್ರಹದಿಂದ 2014-2015 ಸಾಲಿನಲ್ಲಿ 13 ಲಕ್ಷ ರೂ ಮೊತ್ತದ ‘ಸಾರ್ವಭೌಮ’ ವಿದ್ಯಾರ್ಥಿ ವೇತನ ನೀಡಲಾಗಿದೆ.

2015-2016 ಸಾಲಿನಲ್ಲಿ 19 ಲಕ್ಷ ರೂ. ಗಳನ್ನು ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವಾಗಿ ವಿತರಿಸಲಾಗಿದೆ.

 ಸ್ಥಳೀಯ ಅನಾರೋಗ್ಯ ಪೀಡಿತರಿಗೆ, ಆಟೋಟ ಕಾರ್ಯಕ್ರಮಗಳಿಗೆ ಸಹಾಯಧನ ನೀಡಲಾಗುತ್ತಿದೆ.

 ಆರ್ಥಿಕವಾಗಿ ಹಿಂದುಳಿದ ಸೂಕ್ತ ವಧೂ-ವಧರಿಗೆ ಉಚಿತವಾಗಿ ವಿವಾಹ ಮಾಡಿಕೊಡಲಾಗುತ್ತಿದೆ.

 ಶ್ರೀ ದೇವಾಲಯದ ವತಿಯಿಂದ ಉಚಿತವಾಗಿ ಪ್ರಥಮ ಚಿಕಿತ್ಸೆಯನ್ನು ಒದಗಿಸಲಾಗುತ್ತಿದೆ.

 ದೂರ ದೂರದ ಭಕ್ತರು ಶ್ರೀ ದೇವಾಲಯದ ವಿಷಯ ತಿಳಿದುಕೊಳ್ಳಲು ಅನುಕೂಲವಾಗುವಂತೆ ಅಂತರ್ಜಾಲ ತಾಣ, ಫೇಸ್‍ಬುಕ್, ಟ್ವಿಟರ್ ಸಾಮಾಜಿಕ ಜಾಲತಾಣ ಪ್ರಕಟಿಸಿ ಪ್ರಚುರಪಡಿಸಲಾಗುತ್ತಿದೆ .

-ಪ್ರ- ಈ ಎಲ್ಲಾ ಸಾಮಾಜಿಕ ಬದಲಾವಣೆಗಳು ಆಡಳಿತದ ಯಂತ್ರದ ಸಹಜ ಸಾಧನೆಯಾಗಿದ್ದು ಈಳಿದ ದೊಡ್ಡ ದೊಡ್ಡ ದೇವಾಲಯಗಳಿಂದ ನಡೆಯುತ್ತಿರುವ ಸಮಾಜಸೇವೆಯನ್ನ ಹೋಲಿಸಿದಲ್ಲಿ ಇನ್ನೂ ಸಾಕಷ್ಟು ಮುಂದುವರಿಯಬೇಕಾಗಿದೆ.

5. ಆಡಳಿತ ನಿರ್ವಹಣೆಯಲ್ಲಿ ಪಾರದರ್ಶಕತೆ :

 ಶ್ರೀ ದೇವಾಲಯದ ಆಡಳಿತವನ್ನು ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಮಾರ್ಗದರ್ಶನದಂತೆ ಪಾರದರ್ಶಕವಾಗಿ, ಧರ್ಮ-ಶಾಸ್ತ್ರ ಸಮ್ಮತವಾಗುವ ರೀತಿಯಲ್ಲಿ ಭಕ್ತಜನರ ಹಿತ, ಸಮಾಧಾನವನ್ನು ಪರಿಗಣಿಸಿ ನಡೆಸಿಕೊಂಡು ಬರಲಾಗುತ್ತಿದೆ.

 ಪೂಜಾ ವಿಭಾಗ, ಕಾರ್ಯಾಲಯ ವಿಭಾಗ, ಅಮೃತಾನ್ನ ವಿಭಾಗ, ಆರ್ಥಿಕ ವಿಭಾಗ, ಖರೀದಿ ವಿಭಾಗ, ನಿರ್ಮಾಣ-ನಿರ್ವಹಣೆ ವಿಭಾಗ, ಸಂಗ್ರಹ ವಿಭಾಗ, ಭದ್ರತಾ ವಿಭಾಗ ಹೀಗೆ ವಿಭಾಗಗಳನ್ನು ಮಾಡಿ ಶ್ರೀಸಂಸ್ಥಾನದವರ ಕಾರ್ಯದರ್ಶಿ ಮತ್ತು ಪದನಿಮಿತ್ತ ಆಡಳಿತಾಧಿಕಾರಿಗಳವರ ಉಸ್ತುವಾರಿಯಲ್ಲಿ ಶ್ರೀರಾಮಚಂದ್ರಾಪುರಮಠದ ಮುಖ್ಯಕಾರ್ಯನಿರ್ವಹಣಾಧಿಕಾರಿಗಳವರ ಸಲಹೆ-ಸೂಚನೆ ಪಡೆದು ಆಡಳಿತ ನಿರ್ವಹಣೆ ಮಾಡಲಾಗುತ್ತಿದೆ.

 ಭಕ್ತಜನತೆ ನೀಡಿದ ದೇಣಿಗೆ, ಸುವಸ್ತು, ಎಲ್ಲವಕ್ಕೂ ರಸೀದಿ ನೀಡಿ ರಖಂನ್ನು ಜಮಾ ತೆಗೆದುಕೊಂಡು ದೈನಂದಿನ ಲೆಕ್ಕಪತ್ರಗಳನ್ನು ನೋಡಿಕೊಳ್ಳಲಾಗುತ್ತಿದೆ. ಗಣಕೀಕೃತ ರಸೀದಿ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಮತ್ತು ಲೆಕ್ಕಪರಿಶೋಧಕರಿಂದ ವಾರ್ಷಿಕ ಆಡಿಟ್ ಮಾಡಿಸಲಾಗುತ್ತಿದೆ.

-ಪ್ರ- ಕಡೆಯದಾಗಿ ಹೇಳುವುದಾದರೆ, ಮೇಲ್ನೋಟಕ್ಕೆ ಸಾಕಷ್ಟು ಬದಲಾವಣೆ, ಬೆಳವಣಿಗೆ, ಸುಧಾರಣೆ ಏನೇನೋ ಆಗಿದೆ. ಆದರೆ ಆಡಳಿತಕ್ಕೆ, ಇಲ್ಲಿಯ ಹಲವು ಸ್ಥರಗಳ ಕೆಲಸಕ್ಕೆ ಅನೇಕರು ನೇಮಿಸಲ್ಪಟ್ಟಿದ್ದಾರೆ. ಅವರಲ್ಲಿ ಬಹುಪಾಲಿನವರು ಹೊರಗಿನವರು. ಇನ್ನು ಕೆಲವರು ಅಷ್ಟೊಂದು ಒಳ್ಳೆಯ ಚಾರಿತ್ರ್ಯವನ್ನು ಹೊಂದದೇ ಇರುವವರು. ಹಾಗೂ ಕೆಲವರು ಧಾರ್ಮಿಕ ಭಾವನೆ ಅಥವಾ ಪ್ರಜ್ಞೆಯನ್ನೆ ಹೊಂದದಿರುವವರು. ಈ ಕ್ಷೇತ್ರದ, ದೇವಾಲಯದ ಪೂಜಾದಿಗಳ ಹಿನ್ನೆಲೆ, ಇತಿಹಾಸ, ಮಹತ್ವಗಳನ್ನ ತಿಳಿಯದೂವರು ಅಥವಾ ತಿಳಿದಿದ್ದೂರೂ ಅದಕ್ಕೆ ತಕ್ಕಂಥ ಮರ್ಯಾದೆಯನ್ನ ಕೊಟ್ಟು ತಮ್ಮಯ ಕೆಲಸವನೂನ ಮಾಡಾದಿರುವವರನ್ನ ಇಟ್ಟುಕೊಂಡರೆ ಎಂಥಹ ಸ್ವಚ್ಛ ಆಡಳಿತ, ಅಥವಾ ಸೇವಾಕಾರ್ಯಗಳು ನಡೆದೀತು ಆ ಮಹಾಬಲೇಶ್ವರನಲ್ಲಿ……?
ಶ್ರೀ ದೇವಾಲಯದ ಅಮೃತಾನ್ನ ಭೋಜನಾಲಯದಲ್ಲಿ ಕೆಲಸ ಮಾಡುವ ಒಬ್ಬ ಹವ್ಯಕ ಸ್ನೇಹಿತನೇ (ಗೋಕರ್ಣ ದವರಲ್ಲ) ಹೇಳುವ ಪ್ರಕಾರ- ‘ಈ ದೇವಾಲಯದ ಪ್ರತಿಯೊಂದು ವಿಭಾಗದಲ್ಲೂ ಬ್ರಷ್ಟಾಚಾರ ನಡೆಯುತ್ತಿದೆ. ರಾಮನ ಲೆಕ್ಕ ಕೃಷ್ಣನ ಲೆಕ್ಕಗಳು ತೀರಾ ಮಾಮೂಲಾಗಿದೆ. ಅಡುಗೆಮನೆಯ ಉಪ್ಪಿನಿಂದ ಹಿಡಿದು ಪೂಜೆಯ ಸಾಮಗ್ರಿಯವರೆಗೆ, ಕಾರ್ಯಾಲಯದ ಲೆಕ್ಕದಿಂದ ಹಿಡಿದು ಉಪಾದಿವಂತ ಅರ್ಚಕರ ಪೂಜೆಯ ಪಾವತಿಯ ವರೆಗಿನ ವಿಷಯದಲ್ಲೂ ಬ್ರಷ್ಟಾಚಾರ. ಅಷ್ಟೇ ಏಕೆ ಉಪಾದಿವಂತರಿಗೆ ಕೊಟ್ಟಿರುವ ಸಮವಸ್ತ್ರದ ಹಂಚಿಕೆಯಲ್ಲೂ ಭಾರೀ ನುಂಗಾಟಗಳು ನಡೆದಿದೆ ಎಂಬುದೂ ಬೇಸರ ಮೂಡಿಸುವ ಸತ್ಯ.’

ಇನ್ನು ಪಾರಂಪರಿಕ ಅರ್ಚಕರಿಗೆ ಪೂಜಾಹಕ್ಕನ್ನು ಮೊಟಕುಗೊಳಿಸಿದ್ದು ಖಂಡಿತ ತಪ್ಪು. ನಮ್ಮ ಅಜ್ಜಂದಿರೆಲ್ಲಾ ಹೇಳುವಂತೆ ತಲೆಮಾರುಗಳಿಂದ ಪೂಜಿಸಿಕೊಂಡು ಬಂದ ಅರ್ಚಕರು ಇಂದು ಅಸಹಾಯಕರಾಗಿ ಮನೆಯಲ್ಲಿ ಕುಳಿತಿದ್ದು ನೋಡಿದಾಗ ಹೊಟ್ಟೆಯಲ್ಲಿ ಸಂಕಟವೇ ಆಗುತ್ತದೆ ಅನ್ನುತ್ತಾರೆ. ಈಗಿರುವ ಅನೇಕರು ಎಷ್ಟರಮಟ್ಟಿಗೆ ವಿದ್ಯಾವಂತರು ಎಂಬುದು ಆ ಶಿವನಿಗೇ ಗೊತ್ತು. ಅವರು ತಿಂದು ಎಸೆದ ಖಾಲೀ ಗುಟ್ಕಾ ಪ್ಯಾಕೆಟ್ ಗಳ ರಾಶಿನೋಡಿದಾಗಲೇ ತಿಳಿಯುತ್ತದೆ ಎಷ್ಟರಮಟ್ಟಿಗೆ ಪಾಂಡಿತ್ಯ ಹೊಂದಿದವರಿರಬೆಹುದೆಂದು. (ಮೊನ್ನೆ ಆಡಳಿತ ಕಾರ್ಯಾಲಯದಿಂದಲೇ ಕಟ್ಟುನಿಟ್ಟಾದ ಆದೇಶ ಬಂದಿದೆಯಂತೆ ತಿಂದ ಖಾಲೀ ಗುಟ್ಕಾ ಪ್ಯಾಕ್ ಗಳನ್ನ ದೇವಾಲಯದ ಆವಾರದಲ್ಲಿ ಎಸೆಯಬಾರದು ಎಂದು).ಇಂಥದ್ದೆನ್ನಲ್ಲಾ ನೋಡಿ ಬಹುಷಃ ಮಹಾಬಲನಿಗೇ ಈ ಮಠದ ಆಡಳಿತವು ಸಾಕು ಎನಿಸಿರಬಹುದು ಹಾಗಾಗಿ ಅದು ಕೈ ತಪ್ಪುವ ಸೂಚನೆ ಕಾಣಿಸ್ತಾ ಇದೆ.

ಏನೇ ಇರಲಿ ಸಾರ್ವಭೌಮ ಶ್ರೀ ಮಹಾಬಲೇಶ್ವರ ಸ್ವಾಮಿಯ ಇಚ್ಛೆಯಂತೇ ಎಲ್ಲವೂ ನಡೆಯುವುದು. ಹಾಗಾಗಿ ಈ ದುರಾಡಳಿತವೂ ಅಷ್ಟೇ ಬೇಗ ಮುಗಿಯಲೀ ಅಂಥಾ ಅವನಲ್ಲಿ ಪ್ರಾರ್ಥನೆ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s