‘ಆ 43 ದಿನಗಳು’: ಕೊನೆಕ್ಷಣದಲ್ಲಿ ಗೋಕರ್ಣ ದೇವಾಲಯ ರಾಘವೇಶ್ವರ ಸ್ವಾಮಿ ಪಾಲಾಗಿದ್ದೇಕೆ?

‘ಆ 43 ದಿನಗಳು’: ಕೊನೆಕ್ಷಣದಲ್ಲಿ ಗೋಕರ್ಣ ದೇವಾಲಯ ರಾಘವೇಶ್ವರ ಸ್ವಾಮಿ ಪಾಲಾಗಿದ್ದೇಕೆ?

Byಎನ್ ಎಸ್ ಎ October 8, 2016

“ದೇವಸ್ಥಾನವನ್ನು ಸ್ವಾಧೀನಕ್ಕೆ ವಹಿಸಿಕೊಡಿ ಎಂದು ನಾವು ಯಾವತ್ತೂ ಸರ್ಕಾರವನ್ನು ಕೇಳಿಕೊಂಡಿರಲಿಲ್ಲ. ಬದಲಾಗಿ ಎಂಟು ವರ್ಷಗಳ ಹಿಂದೆ ಸರ್ಕಾರವೇ ಗೋಕರ್ಣ ದೇವಾಲಯ, ರಾಮಚಂದ್ರಾಪುರ ಮಠದ್ದು ಎಂದು ನ್ಯಾಯಾಲಯದಲ್ಲಿ ಅಫಿಡೆವಿಟ್‌ ಸಲ್ಲಿಸಿತ್ತು,” ಹೀಗೊಂದು ಹೇಳಿಕೆಯನ್ನು ಇತ್ತೀಚೆಗೆ ರಾಮಚಂದ್ರಾಪುರ ಮಠದ ಪೀಠಾಧಿಪತಿ ರಾಘವೇಶ್ವರ ಸ್ವಾಮಿ ಹೇಳಿದ್ದರು.

ಗೋಕರ್ಣ ದೇವಾಲಯವನ್ನು ಸರ್ಕಾರ ಮರಳಿ ವಶಕ್ಕೆ ಪಡೆಯುತ್ತಿದೆ ಎಂಬ ವಿಚಾರ ಬಹಿರಂಗವಾಗುತ್ತಿದ್ದಂತೆ ದೊಡ್ಡದೊಂದು ‘ಹೈ ಡ್ರಾಮ’ ಶುರುವಿಟ್ಟುಕೊಂಡಿದೆ. ಈ ನಡೆಯನ್ನು ‘ಧರ್ಮ ವಿರೋಧಿ’ ಎಂಬಂತೆ ಬಿಂಬಿಸಲಾಗುತ್ತಿದೆ. ರಚ್ಚೆ ಹಿಡಿದ ಮಕ್ಕಳಂತೆ ಮಾಧ್ಯಮಗಳು ರಾಘವೇಶ್ವರ ಸ್ವಾಮಿ ಪರವಾಗಿ ಬ್ಯಾಟಿಂಗ್ ಮಾಡಲಾರಂಭಿಸಿವೆ. ಆದರೆ, ಇಡೀ ಪ್ರಕರಣದಲ್ಲಿ ರಾಮಚಂದ್ರಾಪುರ ಮಠದ ಕಡೆಯಿಂದ ಹಸಿ ಹಸಿ ಸುಳ್ಳುಗಳನ್ನು ಹರಿಯ ಬಿಡಲಾಗುತ್ತಿದೆ ಎಂಬುದು ‘ಸಮಾಚಾರ’ಕ್ಕೆ ಲಭ್ಯವಾಗಿರುವ ದಾಖಲೆಗಳು ಹೇಳುತ್ತಿವೆ.

ರಾಮಚಂದ್ರಾಪುರ ಮಠದ ಪಾಲಿಗೆ ಉತ್ತರ ಕರ್ನಾಟಕದ ಗೋಕರ್ಣ ಮಹಾಬಲೇಶ್ವರ ದೇವಸ್ಥಾನವನ್ನು ಸರಕಾರವೇ ನೀಡಿದ್ದು. ನಾವೇನು ಅರ್ಜಿ ಸಲ್ಲಿಸಿರಲಿಲ್ಲ ಎಂದು ಸ್ವಾಮೀಜಿಯ ‘ಅಗಣಿತ’ ಭಕ್ತ ವರ್ಗದವರೂ ಹೇಳುತ್ತಾ ಓಡಾಡುತ್ತಿದ್ದಾರೆ. ಈ ಕುರಿತು ಟಿವಿ ವಾಹಿನಿಗಳಲ್ಲಿ ಚರ್ಚೆಗಳೂ ಶುರುವಾಗಿವೆ.

ಆದರೆ ವಾಸ್ತವದಲ್ಲಿ ಮಠದವರೇ ಮೇಲಿಂದ ಮೇಲೆ ಗೋಕರ್ಣವನ್ನು ನಮಗೆ ನೀಡಿ ಎಂದು ಸರಕಾರಕ್ಕೆ ಪತ್ರ ಬರೆದಿರುವುದು ಬಹಿರಂಗವಾಗಿದೆ. ಮಾತ್ರವಲ್ಲ ಜಿಲ್ಲಾಧಿಕಾರಿ ಸೇರಿದಂತೆ ಹಲವು ಸ್ಥರದ ಅಧಿಕಾರಿಗಳು ದೇವಸ್ಥಾನವನ್ನು ಮಠಕ್ಕೆ ವಹಿಸಿಕೊಡದಂತೆ ಆರಂಭದಲ್ಲಿ ವಿರೋಧ ವ್ಯಕ್ತಪಡಿಸಿದರೂ ಮಹಾಬಲೇಶ್ವರ ಮಠದ ಪಾಲಾಗಿರುವುದು ಕಂಡು ಬರುತ್ತದೆ.

ಮನವಿ ತಿರಸ್ಕರಿಸಿದ ಜಿಲ್ಲಾಧಿಕಾರಿ:

01/02/2008ರಂದು ಶ್ರೀ ಕ್ಷೇತ್ರ ಗೋಕರ್ಣ ಮಹಾಬಲೇಶ್ವರ ಉಪಾಧಿವಂತ ಮಂಡಳಿಯ ಅಧ್ಯಕ್ಷರು ದೇವಸ್ಥಾನವನ್ನು ಮಠ(ರಾಮಚಂದ್ರಾಪುರ)ಕ್ಕೆ ವಹಿಸಿಕೊಡುವಂತೆ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರಿಗೆ ಪತ್ರ ಬರೆದಿದ್ದರು. ಸದರಿ ಪತ್ರವನ್ನು ಆಯುಕ್ತರು ಅಭಿಪ್ರಾಯ ಕೋರಿ 20/02/2008ರಲ್ಲಿ ಉತ್ತರ ಕನ್ನಡ ಜಿಲ್ಲಾಧಿಕಾರಿಗೆ ಕಳುಹಿಸಿಕೊಟ್ಟಿದ್ದರು.

ಈ ಕುರಿತು ತಮ್ಮ ಅಭಿಪ್ರಾಯವನ್ನು 1/04/2008ರಲ್ಲಿ ಆಯುಕ್ತರಿಗೆ ತಿಳಿಸಿದ್ದ ಜಿಲ್ಲಾಧಿಕಾರಿಗಳು, “ಶ್ರೀ ರಾಮಚಂದ್ರಾಪುರ ಮಠ ಒಂದು ಸಮಾಜಕ್ಕೆ ಸೇರಿದ ಖಾಸಗಿ ಸಂಸ್ಥೆಯಾಗಿರುತ್ತದೆ. ಹಾಗೂ ಗೋಕರ್ಣ ಶ್ರೀ ಮಹಾಬಲೇಶ್ವರ ದೇವಸ್ಥಾನವು ಸಾರ್ವಜನಿಕ ದೇವಸ್ಥಾನವಾಗಿರುವುದರಿಂದ ಸದರಿ ದೇವಸ್ಥಾನದ ಆಡಳಿತವನ್ನು ಮಠಕ್ಕೆ ವಹಿಸುವುದು ಸೂಕ್ತವಲ್ಲವೆಂದು,” ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಅರ್ಜಿ ತಳ್ಳಿ ಹಾಕಿದ ಕಂದಾಯ:

ಇದಾದ ಬಳಿಕ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರಾಗಿದ್ದ ಶ್ಯಾಮ್ ಭಟ್, 14/05/2008ರಂದು ಅಭಿಪ್ರಾಯ ಕೋರಿ ಕಂದಾಯ ಇಲಾಖೆಯ ಕಾರ್ಯದರ್ಶಿಗಳಿಗೆ ಪತ್ರ ಬರೆಯುತ್ತಾರೆ. ಆದರೆ ಈ ಪತ್ರದಲ್ಲಿ ಶ್ಯಾಮ್ ಭಟ್ ಜಿಲ್ಲಾಧಿಕಾರಿಯವರ ಪತ್ರವನ್ನು ಉಪೇಕ್ಷಿಸಿ, ಅವರ ಕೆಳಗಿನ ಸಹಾಯಕ ಆಯುಕ್ತರು ಮತ್ತು ತಹಶೀಲ್ದಾರ್ ವರದಿಯನ್ನು ಪ್ರಸ್ತಾಪಿಸುತ್ತಾರೆ. ರಾಮಚಂದ್ರಾಪುರ ಮಠ ಯಾವುದೋ ಒಂದು ಸಮುದಾಯಕ್ಕೆ ಸೇರಿದ್ದಲ್ಲ ಎಂದು ತಮ್ಮ ವಾದ ಹೂಡುತ್ತಾರೆ (ರಾಮಚಂದ್ರಾಪುರ ಮಠ- ಹಿಂದೂ ಹವ್ಯಕ ಸಂಪ್ರದಾಯದ ಮಠ ಎಂದು ಸ್ವತಃ ರಾಘವೇಶ್ವರರೇ ಮುಜುರಾಯಿ ಇಲಾಖೆಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಹೀಗಿದ್ದೂ ಶ್ಯಾಮ್ ಭಟ್ ಉಲ್ಲೇಖಗಳು ಪ್ರಶ್ನಾರ್ಹವಾಗಿವೆ). ಸಾರ್ವಜನಿಕ ದೇವಸ್ಥಾನಗಳು ಮಠಗಳ ಆಡಳಿತಕ್ಕೆ ಒಳಪಟ್ಟಿರಬಾರದು ಎಂಬುದು ಸರಿಯಲ್ಲ ಎಂಬ ಸಾಲುಗಳನ್ನು ಸೇರಿಸಿ, ಕೊನೆಗೆ ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಅಡ್ವೊಕೇಟ್ ಜನರಲ್ ಅಭಿಪ್ರಾಯ ಪಡೆದು ಈ ಬಗ್ಗೆ ಸರಕಾರದ ಹಂತದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವಂತೆ ಕೋರಿ ಪತ್ರ ಬರೆಯುತ್ತಾರೆ.

ಆದರೆ ಕಾನೂನು ಕೋಶ ಹಾಗೂ ರಾಜ್ಯಪಾಲರೂ ದೇವಸ್ಥಾನವನ್ನು ಮಠಕ್ಕೆ ವಹಿಸುವುದಕ್ಕೆ ವಿರೋಧ ವ್ಯಕ್ತಪಡಿಸಿ ಸ್ಪಷ್ಟ ಅಭಿಪ್ರಾಯ ಕಳುಹಿಸಿಕೊಟ್ಟಿದ್ದರು. ಈ ಹಿನ್ನಲೆಯಲ್ಲಿ ಕಂದಾಯ ಇಲಾಖೆ ಕಾರ್ಯದರ್ಶಿ ಸಿ. ಎನ್. ಸೀತಾರಾಮ್ 19/05/2008 ರಂದು ಶ್ಯಾಮ್ ಭಟ್ ಗೆ ಉತ್ತರಿಸಿದ್ದಾರೆ. ಸದರಿ ಪತ್ರದಲ್ಲಿ “ಇನ್ನು ಮುಂದೆ ಯಾವುದೇ ದೇವಸ್ಥಾನವನ್ನು ಡಿನೋಟಿಫಿಕೇಷನ್ ಮಾಡುವಂತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಬಾರದು ಎಂದು ತಮಗೆ ತಿಳಿಯಬಯಸುತ್ತೇನೆ,” ಎಂದು ಖಾರವಾಗಿಯೇ ಹೇಳುತ್ತಾರೆ.

1gokarna-ayuktharu-reject-e1475864237483

ದೇವಸ್ಥಾನವನ್ನು ಡಿನೋಟಿಫಿಕೇಷನ್ ಮಾಡದಂತೆ ಕಂದಾಯ ಇಲಾಖೆ ಕಾರ್ಯದರ್ಶಿ ಧಾರ್ಮಿಕ ದತ್ತಿ ಇಲಾಖೆ ಆಯುಕ್ತ ಶ್ಯಾಮ್ ಭಟ್ ಗೆ ಬರೆದ ಪತ್ರ

ಕಂದಾಯ ಇಲಾಖೆ ಪೀಠಾಧಿಕಾರಿ ಎಲ್.ಎಸ್. ಶ್ರೀಕಂಠಯ್ಯ ಅವರೂ ಕಾನೂನು ಕೋಶದ ಮುಖ್ಯಸ್ಥರ ಅಭಿಪ್ರಾಯದಂತೆ ನೀವು ಕಳುಹಿಸಿರುವ ಪ್ರಸ್ತಾವನೆಯನ್ನು ತಿರಸ್ಕರಿಸಲಾಗಿದೆ ಎಂದು 29/05/2008ರಂದು ಪತ್ರ ಬರೆಯುತ್ತಾರೆ.

ಕೊನೆಗೆ, ಇದೇ ಅಭಿಪ್ರಾಯದ ಹಿನ್ನಲೆಯಲ್ಲಿ ಶ್ಯಾಮ್ ಭಟ್ ಉತ್ತರ ಕನ್ನಡ ಜಿಲ್ಲಾಧಿಕಾರಿಗೆ 30/06/2008ರಲ್ಲಿ ಪತ್ರ ಬರೆಯುತ್ತಾರೆ. ಕಂದಾಯ ಇಲಾಖೆ ಕಾರ್ಯದರ್ಶಿ ಪತ್ರದ ಪ್ರತಿಯನ್ನು ಲಗತ್ತಿಸಿ, “ಸರಕಾರದ ನಿರ್ದೇಶನ ಮತ್ತು ಅಭಿಪ್ರಾಯದ ಹಿನ್ನಲೆಯಲ್ಲಿ ಇನ್ನು ಮುಂದೆ ದೇವಾಲಯಗಳನ್ನು ಅಧಿಸೂಚಿಸುವ ಸಂಸ್ಥೆಗಳ ಪಟ್ಟಿಯಿಂದ ಹೊರತುಪಡಿಸುವ ಬಗ್ಗೆ ಯಾವುದೇ ಪ್ರಸ್ತಾವನೆ ಕಳುಹಿಸಬಾರದೆಂದು ಈ ಮೂಲಕ ತಿಳಿಯಪಡಿಸಿದೆ,” ಎಂದು ಹೇಳುತ್ತಾರೆ.

43 ದಿನಕ್ಕೆ ಉಲ್ಟಾ ಹೊಡೆದ ಸರಕಾರ!:

ಇನ್ನೇನು ಸರಕಾರದ ಕೈಯಲ್ಲೇ ಗೋಕರ್ಣ ಉಳಿಯುತ್ತದೆ ಎಂಬ ವಾತಾವರಣ ನಿರ್ಮಾಣವಾಗಿತ್ತು. ಆದರೆ ಸರಕಾರ ಏಕಾಏಕಿ ಉಲ್ಟಾ ಹೊಡೆದು ಬಿಟ್ಟಿತು. ಯಾವ ಕಂದಾಯ ಇಲಾಖೆ ಪೀಠಾಧಿಪತಿ ದೇವಸ್ಥಾನವನ್ನು ಮಠಕ್ಕೆ ಕೊಡಬೇಡಿ ಎಂದು ಹೇಳಿದ್ದರೋ ಅದೇ ಎಲ್.ಎಸ್. ಶ್ರೀಕಂಠಯ್ಯ ಈ ಬಾರಿ ದೇವಸ್ಥಾನವನ್ನು ಪೂರ್ತಿ ಮಠಕ್ಕೆ ಹಸ್ತಾಂತರಿಸುವಂತೆ ಜಿಲ್ಲಾಧಿಕಾರಿಗೆ ಆದೇಶ ನೀಡುತ್ತಾರೆ.

2gokarna-order-shrikantha-babu-e1475864266773

ದೇವಸ್ಥಾನವನ್ನು ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರಿಸುವಂತೆ ಜಿಲ್ಲಾಧಿಕಾರಿಗೆ ಕಂದಾಯ ಇಲಾಖೆ ಪೀಠಾಧಿಕಾರಿ ಬರೆದ ಪತ್ರ

ಕರ್ನಾಟಕ ರಾಜ್ಯಪಾಲರ ಆಜ್ಞೆಯನುಸಾರ ದಿನಾಂಕ 12/08/2008ರಂದು ಶ್ರೀಕಂಠಯ್ಯ ಹೊರಡಿಸಿದ ಕರ್ನಾಟಕ ಸರಕಾರದ ನಡಾವಳಿಯಲ್ಲಿ ಹೀಗೆ ಹೇಳಿದ್ದಾರೆ. “‘ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಕಾಯ್ದೆ – 1997’ರ ಸೆಕ್ಷನ್ 1 (4) (1) ರ ಪ್ರಕಾರ ಒಂದು ಮಠಕ್ಕೆ ಅಥವಾ ಅದಕ್ಕೆ ಸೇರಿದ ಒಂದು ದೇವಸ್ಥಾನಕ್ಕೆ ಈ ಕಾಯ್ದೆಯು ಅನ್ವಯಿಸತಕ್ಕದ್ದಲ್ಲ ಎಂದಿರುತ್ತದೆ. ಗೋಕರ್ಣ ಶ್ರೀ ಮಹಾಬಲೇಶ್ವರ ದೇವಸ್ಥಾನವು ಹಿಂದೆ ಶ್ರೀ ರಾಮಚಂದ್ರಾಪುರ ಮಠದ ಆಡಳಿತ ವ್ಯಾಪ್ತಿಗೆ ಒಳಪಟ್ಟ ಸಂಸ್ಥೆ ಎಂಬ ಮನವಿಯ ಹಿನ್ನಲೆಯಲ್ಲಿ ದೇವಸ್ಥಾನವನ್ನು ಅಧಿಸೂಚಿತ ಸಂಸ್ಥೆಗಳ ಪಟ್ಟಿಯಿಂದ ಕೈಬಿಡಬಹುದೆ ಎಂಬ ಬಗ್ಗೆ ರಾಜ್ಯದ ಅಡ್ವೊಕೇಟ್ ಜನರಲ್ ಅವರ ಅಭಿಪ್ರಾಯ ಪಡೆಯಲಾಗಿ, ಈ ದೇವಸ್ಥಾನವನ್ನು ಅಧಿಸೂಚಿತ ಸಂಸ್ಥೆಗಳ ಪಟ್ಟಿಯಿಂದ ಹೊರತುಪಡಿಸಬಹುದೆಂದು ಅಭಿಪ್ರಾಯ ನೀಡಿರುತ್ತಾರೆ ಮತ್ತು ಕಾನೂನು ಇಲಾಖೆಯೂ ಸಹ ಎಜಿಯವರ ಅಭಿಪ್ರಾಯಕ್ಕೆ ಸಹಮತ ವ್ಯಕ್ತಪಡಿಸಿರುತ್ತದೆ.”

ಇದರಿಂದ “ಸದರಿ ದೇವಸ್ಥಾನದ ಸಂಪೂರ್ಣ ಆಡಳಿತವನ್ನು ಶಿವಮೊಗ್ಗ ಜಿಲ್ಲೆ ಹೊಸನಗರ ಶ್ರೀ ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರಿಸಲು ಉತ್ತರ ಕನ್ನಡ ಜಿಲ್ಲಾಧಿಕಾರಿಕಾರಿಗಳಿಗೆ ಸೂಚಿಸಲಾಗಿದೆ,” ಎಂದು ನಡಾವಳಿಯಲ್ಲಿದೆ. ಹೀಗೆ ರಾಮಚಂದ್ರಾಪುರದ ಕೈಗೆ ಗೋಕರ್ಣದ ಚುಕ್ಕಾಣಿ ಸಿಗುತ್ತದೆ.

ಮಠಾಧಿಪತಿಯ ಸುಳ್ಳುಗಳ ಸರಮಾಲೆ

ದೇವಸ್ಥಾನವನ್ನು ಸ್ವಾಧೀನಕ್ಕೆ ವಹಿಸಿಕೊಡಿ ಎಂದು ನಾವು ಯಾವತ್ತೂ ಸರ್ಕಾರವನ್ನು ಕೇಳಿಕೊಂಡಿರಲಿಲ್ಲ ಎಂದು ರಾಘವೇಶ್ವರರು ಆಗಾಗ ಹೇಳುತ್ತಾ ಬಂದಿದ್ದಾರೆ. ಆದರೆ ದೇವಸ್ಥಾನವನ್ನು ಮಠಕ್ಕೆ ಕೊಡಿ ಎಂದು ಮೂರು ಬಾರಿ ಪತ್ರ ಬರೆದಿರುವುದು ಗೊತ್ತಾಗಿದೆ.

ಮೊದಲಿಗೆ 29/03/2008ರಂದು ಮಠದ ಕಡೆಯಿಂದ ಧಾರ್ಮಿಕ ದತ್ತಿ ಇಲಾಖೆಗೆ ಪತ್ರ ಬರೆದು ಒಟ್ಟು 8 ಸಂಸ್ಥೆಗಳನ್ನು ಮಠಕ್ಕೆ ನೀಡುವಂತೆ ಕೇಳಿಕೊಂಡಿದ್ದರು. ಇದರಲ್ಲಿ 4 ಮಠ ಹಾಗೂ 4 ದೇವಾಲಯಗಳಿದ್ದವು. ಇವೆಲ್ಲಾ ಒಂದು ಕಾಲದಲ್ಲಿ ಅಧೀನ ಮತ್ತು ಶಾಖಾ ಮಠಗಳು. ಇವೆಲ್ಲಾ ಮಠಕ್ಕೇ ಸೇರಿದ್ದು ಎಂದು ರಾಘವೇಶ್ವರರು ಪತ್ರದಲ್ಲಿ ವಾದಿಸಿದ್ದರು. ಇದರಲ್ಲಿ ಮಹಾಬಲೇಶ್ವರ ದೇವಸ್ಥಾನ ಇರಲಿಲ್ಲ.

ಆದರೆ ಮುಂದೆ 12/04/2008 ಮತ್ತು 08/05/2008ರಲ್ಲಿ ಎರಡು ಪ್ರತ್ಯೇಕ ಪತ್ರಗಳನ್ನು ರಾಮಚಂದ್ರಾಪುರ ಮಠದ ಪರವಾಗಿ ಧಾರ್ಮಿಕ ದತ್ತಿ ಇಲಾಖೆಗೆ ಬರೆಯಲಾಗಿತ್ತು. ಇದರಲ್ಲಿ “ದೇವಸ್ಥಾನದ ಆಡಳಿತ ನಿರ್ವಹಣೆ ಹತೋಟಿಗಳನ್ನು ಶ್ರೀ ಮಠಕ್ಕೆ ಸಂಪೂರ್ಣ ವಹಿಸಿಕೊಟ್ಟು ತನ್ಮೂಲಕ ಶ್ರೀ ಕ್ಷೇತ್ರ ಗೋಕರ್ಣದ ಸರ್ವತೋಮುಖ ಅಭಿವೃದ್ಧಿಗೆ ಶ್ರೀಮಠವು ಶ್ರಮಿಸಲು ಅನುವು ಮಾಡಿಕೊಡಬೇಕೆಂದು ಘನ ಸರಕಾರವನ್ನು ಕೋರಿದೆ,” ಎನ್ನಲಾಗಿತ್ತು.

3gokarna-4-e1475864196846

ಮಹಾಬಲೇಶ್ವರ ದೇವಸ್ಥಾನದ ಆಡಳಿತವನ್ನು ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರಿಸುವಂತೆ ಮಠದ ಕಡೆಯಿಂದ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರಿಗೆ ಬರೆದ ಪತ್ರ

ವಿಚಿತ್ರವೆಂದರೆ ಈ ಹಿಂದೆ ಕೋರಿದ ಯಾವ ದೇವಸ್ಥಾನಗಳನ್ನೂ ಮಠದ ಸುಪರ್ದಿಗೆ ನೀಡದೆ, ದೊಡ್ಡ ಪ್ರಮಾಣದ ಆದಾಯವಿದ್ದ ದೇವಸ್ಥಾನವನ್ನು ಮಾತ್ರ ಮಠಕ್ಕೆ ನೀಡಲಾಯಿತು. “ನಾವು ಆಗ ಕೇಳಿಕೊಂಡ ದೇವಸ್ಥಾನಗಳು ಇನ್ನೂ ಪ್ರಸ್ತಾವನೆ ಹಂತದಲ್ಲೇ ಇವೆ. ಕೇವಲ ಮಹಾಬಲೇಶ್ವರ ದೇವಲಾಯವನ್ನು ಮಾತ್ರ ನೀಡಲಾಗಿದೆ,” ಎನ್ನುತ್ತಾರೆ ಮಠದ ಸಿಇಒ ಕೆ. ಜಿ. ಭಟ್.

‘ದೇವಾಲಯ ಸಾರ್ವಜನಿಕ’ ಎಂದು ಧಾರ್ಮಿಕ ಮತ್ತು ದತ್ತಿ ಇಲಾಖೆಯಿಂದ 24/09/2008ರಲ್ಲಿ ನೀಡಿದ ಸ್ಪಷ್ಟನೆಯಲ್ಲಿಯೂ ಹೇಳಲಾಗಿದೆ. ಸಾರ್ವಜನಿಕ ದೇವಸ್ಥಾನವನ್ನು ಮುಜುರಾಯಿ ಇಲಾಖೆಗೆ ಆಡಳಿತ ನಡೆಸುವ ಎಲ್ಲಾ ಅರ್ಹತೆಗಳಿದ್ದೂ ಪುನಃ ವಾಪಸ್ ಬಿಟ್ಟು ಕೊಟ್ಟಿದ್ದೇಕೆ?

“ದೇವಾಲಯ ಮಠಕ್ಕೆ ಸೇರಿದ್ದಾದರೂ ಸರಕಾರ ತನ್ನ ಸುಪರ್ದಿಗೆ ತೆಗೆದುಕೊಳ್ಳಲು ಮುಕ್ತವಾದ ಅವಕಾಶವಿದೆ. ಆದರೆ ಗೋಕರ್ಣವನ್ನು ಪಡೆದುಕೊಂಡು ಮತ್ತೆ ಬಿಟ್ಟುಕೊಡುವ ಸರಕಾರದ ನಡೆಯಲ್ಲಿ ಅನುಮಾನಗಳು ಏಳುತ್ತವೆ. ಇದೇ ರೀತಿ ಹಿಂದೆ ಬೇರೆ ಮಠಗಳೂ ದೇವಾಲಯಗಳನ್ನು ನೋಡಿಕೊಳ್ಳುತ್ತಿದ್ದವು. ಆದರೆ ಇದೊಂದೇ ಮಠಕ್ಕೆ ದೇವಸ್ಥಾನವನ್ನು ವಾಪಸ್ಸು ನೀಡುವ ತಾರತಮ್ಯಗಳನ್ನು ಸರಕಾರ ಮಾಡಕೂಡದು. ಅದರಲ್ಲೂ ನಮ್ಮ ಆಡಳಿತದಲ್ಲಿ ಇದ್ದಿದ್ದು ಎನ್ನವ ಕ್ಷುಲಕ ಕಾರಣಕ್ಕೆ ನೀಡಲೇ ಕೂಡದು. ವಿಶೇಷ ಕಾರಣಗಳೇನಾದರೂ ಇದ್ದರೆ ಅದು ಬೇರೆ,” ಎನ್ನುತ್ತಾರೆ ಸುಪ್ರಿಂ ಕೋರ್ಟಿನ ವಕೀಲ ಕೆ.ವಿ.ಧನಂಜಯ್.

ಸರಕಾರದ ಈ ನಡೆಯ ಹಿಂದೆ ಇದ್ದ ಉದ್ದೇಶವೇನು? ಭಾರಿ ಆದಾಯವಿದ್ದ ದೇವಸ್ಥಾನವನ್ನೇ ತುರ್ತಾಗಿ ಯಾಕೆ ನೀಡಲಾಯಿತು? ಈಗ ಉಳಿದ ಮಠಗಳೂ ಈ ಹಿಂದೆ ತಮ್ಮ ಆಡಳಿತದಲ್ಲಿದ್ದ ದೇವಸ್ಥಾನಗಳನ್ನು ಮರಳಿ ಕೇಳಬಹುದೇ? ಎಂಬ ಪ್ರಶ್ನೆಯೂ ಇಲ್ಲಿ ಉದ್ಭವಿಸುತ್ತದೆ. ಇದಲ್ಲದೇ ಸರಕಾರ ಏಕಾಏಕಿ ತನ್ನ ನಿರ್ಧಾರ ಬದಲಿಸಿದ್ದರ ಉದ್ದೇಶ ಏನು ಎಂಬ ಬಗ್ಗೆಯೂ ಅನುಮಾನಗಳು ಏಳುತ್ತವೆ.

ಅಂದ ಹಾಗೆ ಅವತ್ತು ಮುಖ್ಯಮಂತ್ರಿಯಾಗಿದ್ದವರು ಬಿ.ಎಸ್ ಯಡಿಯೂರಪ್ಪ ಹಾಗೂ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರಾಗಿದ್ದವರು ಹಲವು ಆರೋಪಗಳಿರುವ ಹೊತ್ತಿರುವ ಇವತ್ತಿನ ಕರ್ನಾಟಕ ಲೋಕಸೇವಾ ಆಯೋಗದ ಆಯುಕ್ತ ಶ್ಯಾಮ್ ಭಟ್. ಇವತ್ತು ಆದಾಯವಿರುವ ಗೋಕರ್ಣ ದೇವಾಲಯವನ್ನು ಸರಕಾರದ ಖಜಾನೆಗೆ ವಾಪಾಸ್ ತೆಗೆದುಕೊಳ್ಳಲು ಮುಂದಾದರೆ, ಅದಕ್ಕೆ ಸುಳ್ಳುಗಳ ಸರಮಾಲೆಯನ್ನೇ ಕಟ್ಟಿ ಗುಲ್ಲೆಬ್ಬಿಸುವ ಪ್ರಯತ್ನಗಳು ನಡೆಯುತ್ತಿವೆ ಎಂಬುದನ್ನು ದಾಖಲೆಗಳು ಮುಂದಿಡುತ್ತಿವೆ. ನಂಬಿಕೆ ಎಂಬುದು ವ್ಯವಹಾರವಾದಾಗ ಏನೇನು ನಡೆಯಬಹುದು ಎಂಬುದಕ್ಕೆ ಇದು ಉದಾಹರಣೆ, ಅಷ್ಟೆ.

source: http://samachara.com/gokarna-re-aquire-by-government/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s