ವೈಚಾರಿಕ ಚಿಂತನೆ-೪
………………………….
ನಿಜ.,…,
ಪ್ರಪಂಚದಲ್ಲಿರುವ ಪ್ರತಿಯೊಂದು ಪದಾರ್ಥಕ್ಕೂ ತನ್ನದೇ ಆದ ಒಂದು ಗುಣವಿದೆ. ಅದು ಆ ಪದಾರ್ಥದ ಪ್ರಾಕೃತಿಕ ಲಕ್ಷಣ. ಪರಿಮಳ ಇರುವಿಕೆಯು ಮಣ್ಣಿನ ಲಕ್ಷಣ. ತಣ್ಣಗಿರುವಿಕೆಯು ನೀರಿನ ಗುಣ.ಬಿಸಿಯಾಗಿರುವಿಕೆಯು ಬೆಂಕಿಯ ಲಕ್ಷಣ.ಈ ರೀತಿ ಪ್ರಕೃತಿಯ ಪ್ರತಿಯೊಂದು ವಸ್ತುವಿಗೂ ಪ್ರತ್ಯೇಕವಾದ ಗುಣವಿದೆ.ಪದಾರ್ಥವನ್ನು ಪರಿವರ್ತನೆ ಗೊಳಿಸಿದರೂ ಆ ಗುಣವು ನಾಶವಾಗುವುದಿಲ್ಲ.ಮಣ್ಣನ್ನು ನೀರಿನಲ್ಲಿ ಕರಗಿಸಿದರೂ, ಬೆಂಕಿಯಲ್ಲಿ ಸುಟ್ಟರೂ ಪರಿಮಳವು ನಾಶವಾಗುವುದಿಲ್ಲ ಏಕೆಂದರೆ ಅದು ಅದರ ಸಹಜ ಗುಣ.ಎಂದೆಂದಿಗೂ ನಾಶವಾಗದಿರುವ ಗುಣವೇ ಆ ವಸ್ತುವಿನ ಸಹಜ ಧರ್ಮ…
….ಅದಕ್ಕೇ ಇರಬೇಕು ಬಹುಶಃ ಇತ್ತೀಚೆಗೆ ಕೆಲವು ಸನ್ಯಾಸಿಗಳು ಕಾವಿ ಧರಿಸಿದರೂ ತಮ್ಮ ಪೂರ್ವಾಶ್ರಮದ ವಾಸನೆಯನ್ನು ಬಿಡುವುದಕ್ಕೆ ಆಗದೆ,..
ಅದೇ ಕಾಮ,ಕ್ರೋಧ,ಲೋಭ,ಮೈಥುನ,ಮೋಹಗಳಿಂದ ಹೊರ ಬರಲಾಗದೆ ಒದ್ದಾಡುತ್ತಾ,..ಓಲಾಡುತ್ತಾ ಇರುವುದು!
ಇದು ಪರಮಾತ್ಮನ ಸೃಷ್ಟಿಯಾದ ಮಾನವನ ಗುಣವೆಂದೋ..? ಏನೋ..?
ಆದರೆ ನಿಜವಾದ ಸನ್ಯಾಸಿಯು ಯೋಗಿಯಾಗಿ ,ತನ್ನ ಪೂರ್ವಾಶ್ರಮದ ಎಲ್ಲಾ ವಾಸನೆಗಳನ್ನು ತ್ಯಜಿಸಿ ತ್ಯಾಗಿಯಾಗಿ ಬರಲೇಬೇಕು.ಅದು ಯತಿನಿಯಮ.!ಇದರ ಬಗ್ಗೆ ವಿಶೇಷ ವಾಗಿ ಹೇಳಬೇಕಾಗಿಲ್ಲ,ಕಠಿಣ ಬ್ರಹ್ಮಚರ್ಯ ಇದರಲ್ಲಿ ಕಡ್ಡಾಯ.!
ಅದಕ್ಕೇ ಪುರಂದರದಾಸರು ಹೇಳುತ್ತಾರೆ,
“ಕಾಮಕ್ರೋಧವ ಬಿಡಿರೆಂಬೊ
ಕಾಗದ ಬಂದಿದೆ
ನೇಮ ನಿಷ್ಟೆಯೊಳಿರೆಂಬೊ
ಕಾಗದ ಬಂದಿದೆ
ತಾಮಸ ಜನರ ಕೂಡದಿರೆಂಬೊ
ಕಾಗದ ಬಂದಿದೆ
ಹೆಣ್ಣಿನಾಸೆ ಬಿಡಿರೆಂಬೊ
ಕಾಗದ ಬಂದಿದೆ
ಹೊನ್ನಿನಾಸೆ ಬಿಡಿರೆಂಬೊ
ಕಾಗದ ಬಂದಿದೆ
ಮಣ್ಣಿನಾಸೆ ಬಿಡಿರೆಂಬೊ
ಕಾಗದ ಬಂದಿದೆ
ಕಾಗದ ಬಂದಿದೆ
ಕಮಲನಾಭನದು.”
ಇದ್ಯಾವುದನ್ನೂ ಬಿಡದೆ ಸನ್ಯಾಸಿಯಾಗಿ ,ಯತಿಯಾಗಿ,ತನ್ನನ್ನು ತಾನೇ ದೇವಮಾನವನೆಂದು ಹೇಳಿಕೊಂಡರೆ ಏನು ಪ್ರಯೋಜನ.?
ಸನ್ಯಾಸಿಯಾದವನಿಗೆ ಒಂದು ಮಾನಸಿಕ ಸ್ಥಿತಿಯನ್ನು ಹೊಂದುವುದು ಸುಲಭ ಸಾಧ್ಯವಲ್ಲ.ತಾನು ಮಾಡುವ ಕೆಲಸ ಕಾರ್ಯದಿಂದ ಲೋಕಕಲ್ಯಾಣವಾಗಲಿ ಎಂದು ಹಾರೈಸುತ್ತಾ,ದೈವಿಕ ಹಾಗೂ ಪ್ರಾಕೃತಿಕ ಶಕ್ತಿಯನ್ನು ಪೂಜೆ,ಜಪ,ತಪ ಇತ್ಯಾದಿಗಳಿಂದ ಒಲಿಸಿಕೊಂಡು ಕೊನೆಗೆ ಸರ್ವ ಸುಖಗಳನ್ನೂ ಬದಿಗೊತ್ತಿ ಆಸೆಯನ್ನು ಮೀರಿನಿಂತು ಆ ಮೂಲಕ ಬದುಕಿನ ಯಾವುದೇ ಸುಖ-ದುಃಖಗಳಿಗೆ ಭಾವನಾತ್ಮಕವಾಗಿ ಸ್ಪಂದಿಸದೇ ಎಲ್ಲವನ್ನೂ ದೈವ ಇಚ್ಛೆ ಎಂದು ಪರಿಗಣಿಸಿ ಸೃಷ್ಟಿ ಪರಿಪೂರ್ಣ ಎಂದು ಪ್ರಕೃತಿಗೆ ಶರಣಾಗುವ ನಿರ್ಲಿಪ್ತ ಮನಸ್ಸನ್ನು ಹೊಂದಿದವನೇ ಸನ್ಯಾಸಿ ಅದನ್ನು ಪಡೆಯಲು ಹಲವಾರು ಜನ್ಮಗಳೇ ಬೇಕಾಗುತ್ತದೆ.
ವೈಚಾರಿಕ ಚಿಂತನೆ. -೩
……………………………
“ನಿಂದಕರಿರಬೇಕು ಹಂದಿಗಳ ಹಾಗೆ.”
ಎಂಬ ದಾಸವಾಣಿ ಯಾಕೋ ನೆನಪಾಗುತ್ತಿದೆ.
” ನಿಂದಕರು ಹತ್ತಿರವಿರಬೇಕು. ಅವರಿಗೆ ನಮ್ಮ ಮನೆಯಂಗಳದಲ್ಲೇ ಕುಟೀರಗಳು ಕಟ್ಟಿ ಕೊಡಬೇಕು. ಅವರು ನೀರು ಸಾಬೂನುಗಳಿಲ್ಲದೇ ಎಲ್ಲವನ್ನೂ ಸ್ವಚ್ಛ ಗೊಳಿಸುತ್ತಾರೆ. ” ಕಬೀರರ ಈ ಮಾತು ಎಷ್ಟೊಂದು ಅರ್ಥಪೂರ್ಣ. !
ನಮ್ಮನ್ನು ದೂಷಿಸುವವರಲ್ಲಿ ಎರಡು ಬಗೆ.ಒಂದು ಬಗೆಯವರು,ನಮ್ಮ ತಪ್ಪುಗಳಿದ್ದಾಗ ಮಾತ್ರ ನಮ್ಮನ್ನು ದೂಷಿಸುತ್ತಾರೆ.ಇವರು ತಪ್ಪುಗಳನ್ನು ಮಾತ್ರ ದ್ವೇಷಿಸುತ್ತಾರೆ ,ನಮ್ಮನ್ನಲ್ಲ. ನಿಜಾರ್ಥದಲ್ಲಿ ಇವರು ನಮ್ಮ ನಿಂದಕರಲ್ಲ.
ಎರಡನೆಯ ಬಗೆಯವರು,ವಿನಾಕಾರಣ ನಮ್ಮನ್ನು ದೂಷಿಸುವವರು,ದೂಷಣೆಯೆಂಬುದು ಇವರಿಗಂಟಿದ ಚಟ.ಇವರು ನಿಂದಕರು ಮಾತ್ರವಲ್ಲ ಕಾರಣರಹಿತ,ಚಟಜನ್ಯ,ದ್ವೇಷ-ಅಸೂಯೆಭರಿತ ನಿಂದಕರು.
ಇವರ ಬಾಯಿಯಿಂದ ಹೊರಡುವ ಒಂದೊಂದು ಅಣಿಮುತ್ತುಗಳೆಂದರೆ, ಇವರ ಕುಲಕ್ಕೇ ಅವಮಾನವಾಗುವಂತೆ ಇರತ್ತದೆ.
ಸಾಮಾನ್ಯವಾಗಿ ಬ್ರಾಹ್ಮಣ ಕುಲದಲ್ಲಿ ಜನಿಸಿದವರ ಬಾಯಲ್ಲಿ ಸುಸಂಸ್ಕೃತ ಪದಗಳೇ ಬರುವುದೆಂಬುದು ಒಂದು ನಂಬಿಕೆ. ಆದರೆ ಇಂದು ಕಲಿಯುಗದ ಪ್ತಭಾವವೋ, ಯಥಾರಾಜ ತಥಾಪ್ರಜೆಯೋ,ಗುರುವಿನಂತೆಯೇ ಶಿಷ್ಯನೋ,ಏನೋ ಗೊತ್ತಿಲ್ಲ ದಿನ ಬೆಳಗಾದರೆ ಮುಖಪುಸ್ತಕದಲ್ಲಿ ಪುಂಖಾನುಪುಂಖವಾಗಿ ಬರುವ ಒಂದೊಂದು ನಿಂದನೆಗಳೂ ಶೂದ್ರಾತಿಶೂದ್ರವಾಗಿರುತ್ತವೆ.! ಮನೋಕ್ಷೋಭೆಗೆ ಒಳಗಾದವರಂತೆ ತೋರುತ್ತದೆ .!
ಭಾರತೀಯ ಋಷಿಮುನಿಗಳ ಮಾನಸಿಕ ವಿಕಾಸದ ಸ್ವರೂಪವು ವಿಶ್ವವ್ಯಾಪಿಯಾಗಿದೆ.
ಇವರ ಭಾವನೆಯು ಸೀಮಿತವಾದ ಮತದ ಮೇರೆಯನ್ನು ಮೀರಿ, ದಿಗಂತ ವಿಶ್ರಾಂತವಾಗಿದೆ.”ಲೋಕಾಃ ಸಮಸ್ತಾಃ ಸುಖಿನೋ ಭವಂತು.” ಎಲ್ಲಾ ಲೋಕಗಳಲ್ಲಿ ಜನರೂ ಸದಾ ಸುಖಿಗಳಾಗಿರಲಿ. ಮಾತ್ರವಲ್ಲ,”ಭದ್ರಂ ಕರ್ಣೇಭಿಃ ಶ್ರುಣು ಯಾಮದೇವಾಃ’.” ಅಂದರೆ ಎಲೈ ದೇವತೆಗಳೇ! ನಮ್ಮ ಕಿವಿಗಳಿಗೆ ಮಂಗಲಕರವಾದ ಶಬ್ಧಗಳೇ ಕೇಳಿಸುತ್ತಿರಲಿ,.!
ಅಸಹ್ಯಕರವಾದ,ಕೀಳುಮಟ್ಟದ, ಹೊಲಸು ಮಾತುಗಳನ್ನು ಕೇಳುವ ದೌರ್ಭಾಗ್ಯವು ನಮಗೆ ಎಂದಿಗೂ ಒದಗದಿರಲಿ. ಪ್ರಸನ್ನತೆಯ ಮತ್ತು ಶಾಂತಿಯ ವಾತಾವರಣವು ವಿಶ್ವವನ್ನು ವ್ಯಾಪಿಸಲಿ.
“ಕಳ ಬೇಡ ಕೊಲ ಬೇಡ,/ ಹುಸಿಯ ನುಡಿಯಲು ಬೇಡ.// ಮುನಿಯ ಬೇಡ/ ಅನ್ಯರಿಗೆ ಅಸಹ್ಯ ಪಡಬೇಡ//
ತನ್ನ ಬಣ್ಣಿಸಬೇಡ/ ಇದಿರು ಹಳಿಯಲು ಬೇಡ/
ಇದೇ ಅಂತರಂಗ ಶುದ್ಧಿ/ ಇದೇ ಬಹಿರಂಗ ಶುದ್ಧಿ/”..ಕೂಡಲಸಂಗಮದೇವ.
“ಸಾಮಾಜಿಕ ನ್ಯಾಯ ನೆಲೆಗೊಳಿಸೋಣ,ಹೊಸ ಸಮಾಜ ನಿರ್ಮಿಸಲು ಹೋರಾಡೋಣ”
ವೈಚಾರಿಕ ಚಿಂತನೆ ೨
…………………………..
ಹಿಂದಿನ ಕಾಲದಲ್ಲಿ ಮಹಾರಾಜರು ಚಿಕ್ಕ ಪುಟ್ಟ ರಾಜರುಗಳನ್ನು ಯುದ್ಧದಲ್ಲಿ ಸೋಲಿಸಿ ಚಕ್ರವರ್ಥಿಗಳು ಎನಿಸಿಕೊಳ್ಳುತ್ತಿದ್ದರು..ಯುದ್ಧದಲ್ಲಿ ಸೋತ ರಾಜರುಗಳು ಬಳಿಕ ಸಾಮಂತರು , ಅವರು ಕರಾರಿನ ಪ್ರಕಾರ ಪ್ರತಿ ವರ್ಷ ಕಪ್ಪಕಾಣಿಕೆ ಸಲ್ಲಿಸತಕ್ಕದ್ದು..!
ಕಾಲಾಂತರದಲ್ಲಿ ಪ್ರಜಾಪ್ರಭುತ್ವದ ವ್ಯವಸ್ಥೆ ಬಂದಾಗ…ಕಪ್ಪಕಾಣಿಕೆ ಹೋಯಿತು ,ಆದರೆ,”ಚರಣಕಾಣಿಕೆ””,ದೀಪಕಾಣಿಕೆ”,ಹಾಗೆಯೇ ಉಳಿಯಿತು.!
ಕೆಲವು ಸಮುದಾಯದ ಮಠಗಳಲ್ಲಿ ಈ ಪದ್ದತಿ ಈಗಲೂ ಮುಂದುವರಿದ ಪರಿಣಾಮವಾಗಿ ಪೀಠಸ್ಥ ಎನಿಸಿಕೊಂಡವನು ತಾನೇ ಚಕ್ರೇಶ್ವರ ಎನಿಸಿಕೊಂಡಿದ್ದಾನೆ.!
ಹೇಗೆ ಮುಳ್ಳುಗಳು ಚುಚ್ಚುವುದೆಂಬ ಭಯದಿಂದ ದುರ್ಬಲರು ಗುಲಾಬಿ ಹೂವುಗಳನ್ನು ಸಂಗ್ರಹಿಸುವುದಿಲ್ಲವೋ,ಹಾಗೆಯೇ ಇಲ್ಲಿ “ಅವನ”ತಂಟೆಗೆ ಯಾರೂ ಹೋಗುವುದಿಲ್ಲ!
ಆದರೆ ದೃಢ ಸಂಕಲ್ಪವಿರುವ ಧೀರರಿಗೆ ತಿಳಿದಿದೆ ,ಉತ್ತಮ ಹೂವುಗಳನ್ನು ಪಡೆಯಲು ಕೆಲವೊಮ್ಮೆ ಮುಳ್ಳುಗಳಿಂದ ಚುಚ್ಚಿಸಿಕೊಳ್ಳ ಬೇಕಾಗುತ್ತದೆಂದು.!
ಪ್ರಜಾಪ್ರಭುತ್ವದದಲ್ಲ್ಲಿ ನಾವು ಇಂಥ ವ್ಯವಸ್ಥೆಗಳಿಂದ ಹೊರ ಬಂದಾಗಲೇ ಸ್ವತಂತ್ರರು ಎನಿಸಿಕೊಳ್ಳೊವುದು.
ಆದರೆ ಕಲಿಯುಗದಲ್ಲಿ ತಾನೇ ಚಕ್ರವರ್ತಿ ಎನಿಸಿಕೊಂಡ. ಪೀಠಸ್ಥನ ಪರಿಸ್ಥಿತಿ ಹೇಗಿರುತ್ತದೆಂದರೆ…..
‘ಕಲಿಯುಗದಲ್ಲಿ ಧರ್ಮವು ಒಂದು ಪಾದ ಮಾತ್ರ ಮತ್ತು ಅಧರ್ಮವು ಉಳಿದ ಮೂರು ಪಾದಗಳು. ಎಂದು ಮನುಧರ್ಮಶಾಸ್ರ್ರದಲ್ಲಿ ಹೇಳಿದೆ.;
“ಸರ್ವತೋಮುಖ ಧರ್ಮಷಡ್ಭಾಗೋ
ರಾಜ್ಞಾ ಭವತಿ ರಕ್ಷಿತಃ/
ಅಧರ್ಮಾದಪಿ ಷಡ್ ಭಾಗೋ
ಭವತ್ಯಸ್ಯ ಹ್ಯರಕ್ಷಿತಃ.//
“ಪ್ರಜಾಪಾಲಕನಾದ ರಾಜನು,ಪ್ರಜೆಗಳು ಮಾಡಿದ ಕರ್ಮಗಳ ಆರನೆಯ ಒಂದು ಭಾಗವನ್ನು ಹೊಂದುತ್ತಾನೆ.
ಅಂದರೆ ಪ್ರಜೆಗಳನ್ನು ಅವನು ಎಷ್ಟೇ ದಕ್ಷತೆಯಿಂದ ಆಳಿದರೂ ಅವರ ಪಾಪದ ಆರನೆಯ ಒಂದು ಭಾಗವನ್ನು ಸ್ವೀಕರಿಸುತ್ತಾನೆ.
ದಿನ ಬೆಳಗಾದರೆ ಕೆಲವು ಬಾಲಬಡುಕರ ಹೊಗಳುಭಟರ ವರ್ತನೆಗಳನ್ನು ಅವರ ಪಾಪಕರ್ಮಗಳನ್ನು ನೋಡಿದರೆ ಇವೆಲ್ಲದರಲ್ಲಿಯೂ “ಅವನೆಷ್ಟು” ಹೊರಬೇಕಾಗುತ್ತದೋ.?
“ಹುಟ್ಟು ಸಾವು ಸಹಜವಾದರೂ ಸಾಮಾಜಿಕ ನ್ಯಾಯ ನೆಲೆಗೊಳಿಸುವುದು ಅನಿವಾರ್ಯ”
ವೈಚಾರಿಕ ಚಿಂತನೆ..೧
…………………………
ಕೆಲವು ವಿಚಾರಗಳು ಎಂದೆಂದಿಗೂ ಪ್ರಸ್ತುತ. ಈ ಭೂಮಿ ಎನ್ನುವುದು ಇರುವವರೆಗೂ ಸಹ.ಅವಕ್ಕೆ ಅಳಿವಿಲ್ಲ.
ಉದಾಹರಣೆಗೆ ಬುದ್ಧನನ್ನೇ ತೆಗೆದುಕೊಳ್ಳೋಣ.ಆತ ಎರಡೂವರೆ ಸಾವಿರ ವರ್ಷಗಳ ಹಿಂದೆ ಈ ನಾಡಿನಲ್ಲಿ ಈ ಮಣ್ಣಿನಲ್ಲಿ ಜನಿಸಿದ ಧ್ರುವತಾರೆ. ಆತ ಹೇಳಿದ ಮಾತುಗಳು ಎಷ್ಟು ಅರ್ಥಗರ್ಭಿತವಾಗಿವೆ.!
“ಯಾವುದನ್ನೂ ನೀನು ಯೋಚಿಸದೆ ವಿಚಾರ ಮಾಡದೆ ಒಪ್ಪಿಕೊಳ್ಳಬೇಡ.”!
“ಪರದ್ರವ್ಯದ ಅಭಿಲಾಷೆ, ಇನ್ನೊಬ್ಬರಿಗೆ ಅನಿಷ್ಟ ಚಿಂತನ,ಮತ್ತು ತಪ್ಪುದಾರಿಯನ್ನು ಹಿಡಿಯುವುದು.ಇವು ಮೂರು ಮಾನಸಿಕ ಪಾಪಕರ್ಮಗಳೆಂದು ತಿಳಿಯಬೇಕು.” ಎನ್ನುವುದೇ ಅವನ ಧ್ಯೇಯವಾಕ್ಯ.
ಇಂಥ ಮಾತುಗಳನ್ನು ಹೇಳುವ ಆತನ ಕಾಲದ ಬಗ್ಗೆಯೂ ನಾವು ಧೀರ್ಘವಾಗಿ ಯೋಚಿಸಬೇಕಾಗುತ್ತದೆ.
ನಮ್ಮ ಕಾಲದಲ್ಲಿಯೇ ಅಂದರೆ ಎರಡು ಮೂರು ವರ್ಷಗಳ ಹಿಂದೆ ನಡೆದ ಘಟನೆಗಳನ್ನೆಲ್ಲಾ ನಾವು ಮರೆತು ಬಿಡುತ್ತೇವೆ,ಅಥವಾ ಅದು ಹಳತಾಗಿರುತ್ತದೆ,ಇಲ್ಲವೇ ಇಂದಿನ ದಿನಗಳಲ್ಲಿ ಆ ವಿಚಾರಗಳು ಸವಕಲಾಗಿ ಜಡ್ಡು ಕಟ್ಟಿರುತ್ತವೆ.ಡಿ.ಎನ್.ಎ.ಬೆರಳಚ್ಚು ..ಇತ್ಯಾದಿ . . ಇತ್ಯಾದಿ.!
,
ಸಾವು ಎನ್ನುವುದನ್ನು ಎಲ್ಲರೂ ಅನುಭವಿಸಲೇಬೇಕು. ಹುಟ್ಟು ಹೇಗೆಯೋ ಹಾಗೆಯೇ ಸಾವು ಸಹ.ಹುಟ್ಟಿದವನು ಒಂದು ದಿನ ಸಾಯಲೇಬೇಕು.ಇದು ಎಲ್ಲರಿಗೂ ತಿಳಿದ ಹಳತಾದ ಮಾತು.
ಇದು ಹೆಚ್ಚಾಗಿ ಸಾವಿಗೆ, ಭಯಪಡುವ ಕೆಲ ಕಾವಿ(ಮಿ) ಸ್ವಾಮೀಜಿಗಳು ತಮ್ಮ ಪ್ರವಚನಗಳಲ್ಲಿ ಬಳಸುವ ಅಣಿ ಮುತ್ತುಗಳು. !
ಆದರೆ ಯಾರೂ ಸಾಯಲು ಇಷ್ಟ ಪಡುವುದಿಲ್ಲ.ಬದುಕುವುದನ್ನೇ ಎಲ್ಲರೂ ಅಪೇಕ್ಷಿಸುತ್ತಾರೆ. ಒಂದು ತಲೆ ನೋವಾದರೂ ಮಾತ್ರೆಯನ್ನು ನುಂಗುವ,ಮೂರು ದಿನ ಜ್ವರ ಬಂದರೆ ಸೂಜಿ ಚುಚ್ಚಿಸುವುದನ್ನೇ ಎಲ್ಲರೂ ಅಪೇಕ್ಷಿಸುತ್ತಾರೆ. ಎಂದರೆ ಆ ಜ್ವರ ಜಾಸ್ತಿಯಾಗಬಾರದು, ಅರ್ಥಾತ್ ತಾನು ಸಾಯಬಾರದು ಎನ್ನುವ ಅಪೇಕ್ಷೆ. ಹುಟ್ಟನ್ನು ಸ್ವಾಗತಿಸಿದ ಹಾಗೆ ಸಾವಿಗೆ ಯಾರು ಕೊರಳೊಡ್ಡುತ್ತಾರೆ.? ಸಾವು ಎಂದರೆ ಎಲ್ಲರಿಗೂ ನಡುಕವೇ.ಸಾಧುಗಳು,ಸಂತರು,ಮಠಾಧಿಪತಿಗಳು, ಬಹಳಷ್ಟು ಆಧ್ಯಾತ್ಮ ಬೋಧಿಸಿದವರೂ ಸಾಯುವುದಕ್ಕೆ ಹಿಂಜರಿಯುತ್ತಾರೆ! ಹೈಟೆಕ್ ಆಸ್ಪತ್ರೆಗಳಲ್ಲಿಯೇ ಅವರ ಶಿಷ್ಯರು ಅವರನ್ನು ಸೇರಿಸುತ್ತಾರೆ.!
ಸಾವಿನ ಬಗ್ಗೆ ಇಷ್ಟೊಂದು ಬೊಗಳೆ ಬಿಡುವ ಇವರು ತಾವು ಸಿಕ್ಕಿ ಹಾಕಿಕೊಂಡಿರುವ ಕೆಲವೊಂದು ತೊಡಕುಗಳನ್ನು ಬಿಡಿಸಿಕೊಳ್ಳಲಾರದೆ ಭಯಪಡುವಂತಾಗಿದೆಯಲ್ಲಾ?…ಸಾವಿಗೆ ಹೆದರದವರು ಡಿ.ಎನ್.ಎ.ಬೆರಳಚ್ಚು ಅಂದರೆ ಭಯಪಡುತ್ತಾರಲ್ಲಾ.?
ಯಾವುದನ್ನೂ ಯೋಚಿಸದೆ ತನ್ನ ಬುದ್ಧಿಯನ್ನು ಸಂಪೂರ್ಣವಾಗಿ ಗುರುವಿಗೆ ಅರ್ಪಿಸುವ ನಮ್ಮಲ್ಲಿರುವ ಮೂರ್ಖತನವೇ…..ಯಾವಾಗ ನಮ್ಮವರಿಗೆ ಸುಜ್ಞಾನವನ್ನು ಕರುಣಿಸುವೆಯೋ.?
Kiran Mannaje