ಸಮರ್ಥ ರಾಮದಾಸರ ಈ ಆದರ್ಶ !

ಸಮರ್ಥ ರಾಮದಾಸರ ಈ ಆದರ್ಶ !

ಸಮರ್ಥ ರಾಮದಾಸರು ವೈರಾಗ್ಯಕ್ಕೆ ಇನ್ನೊಂದು ಹೆಸರು. ಸಂನ್ಯಾಸ ಎಂದರೇನೆಂದು ಅವರಿಂದ ಜಗತ್ತಿನ ಎಲ್ಲ ಸಂನ್ಯಾಸಿಗಳು ಕಲಿಯಬೇಕು. ಅವರಲ್ಲಿ ದೇಹಭಾವ ಶೂನ್ಯ. ಹಾಗಾಗಿಯೇ ಅವರನ್ನು ಜನರು ಹನುಮಂತನ ಅವತಾರವೆಂದು ಕರೆದಿದ್ದಾರೆ.

ಅವರೊಮ್ಮೆ ಶಿಷ್ಯರೊಂದಿಗೆ ಸಂಚಾರಕ್ಕೆ ಹೋಗಿದ್ದರಂತೆ. ಹೋದಾಗ ಅಲ್ಲೊಂದು ಕಬ್ಬಿನಗದ್ದೆ ಕಂಡಿತಂತೆ. ಶಿಷ್ಯರಲ್ಲಿ ಕೆಲವರಿಗೆ ಕಬ್ಬು ತಿನ್ನುವ ಆಸೆಯಾಯಿತು. ತಮಗೆ ಆಸೆಯಾಗಿದೆ ಎಂದು ಹೇಳುವ ಬದಲು ಅವರು ರಾಮದಾಸರ ಬಳಿ “ಕಬ್ಬು ತಿನ್ನುವಿರಾ ಗುರುಗಳೇ?” ಎಂದು ಸಲಹಾತ್ಮಕ ಪ್ರಶ್ನೆ ಇಟ್ಟರು. ದೇಹಭಾವದಿಂದ ಪೂರ್ಣ ಮುಕ್ತರಾಗಿದ್ದ ಸಮರ್ಥರು “ನನಗೆ ತಿನ್ನಬೇಕೆಂದು ಅನಿಸುತ್ತಿಲ್ಲ, ನೀವು ಬೇಕಾದರೆ ತಿನ್ನಿ” ಎಂದು ಉತ್ತರಿಸಿದರು.

ಈ ಶಿಷ್ಯರು ಕಬ್ಬಿನಗದ್ದೆಗೆ ನುಗ್ಗಿ ಹೊರೆಗಟ್ಟಲೇ ಕಬ್ಬನ್ನು ಹೊತ್ತು ತಂದು ತಿನ್ನತೊಡಗಿದರು. ಇದು ಕಬ್ಬಿನಗದ್ದೆಯ ಮಾಲಿಕ ರೈತನಿಗೆ ಗೊತ್ತಾಯಿತು. ಅವನು ಯಾರೋ ಅಪರಚಿತರು ತನ್ನ ಗದ್ದೆಯ ಕಬ್ಬನ್ನು ಹೊರೆಗಟ್ಟಲೆ ಮುರಿದು ತಂದಿದ್ದು ತಿಳಿದು ಕೆಂಡಾಮಂಡಲನಾದ. ಬರುವಾಗ ದೊಡ್ಡದೊಂದು ಬಾರುಕೋಲು ತಂದ. ಬಂದವನೇ ಕೋಪದಿಂದ ಕಬ್ಬು ತಿನ್ನುತ್ತಿರುವ ಶಿಷ್ಯರನ್ನು “ನಿಮಗೆ ನನ್ನ ಕಬ್ಬಿನಗದ್ದೆಗೆ ನುಗ್ಗಿ ಕಬ್ಬು ಮುರಿಯಲು ಹಕ್ಕೇನಿದೆ? ಅಥವಾ ಅನುಮತಿ ನೀಡಿದವರಾರು?” ಎಂದೆಲ್ಲ ಜೋರಿನಿಂದ ಪ್ರಶ್ನಿಸಲಾರಂಭಿಸಿದ. ಹೆದರಿದ ಶಿಷ್ಯರು ಗುರುಗಳಾದ ಸಮರ್ಥರತ್ತ ಕೈ ತೋರಿಸಿದರು. ಈ ರೈತ ಸಮರ್ಥರತ್ತ ನುಗ್ಗಿ ಚಿಳ್ಳೆಂದು ರಕ್ತ ಬರುವಂತೆ ಬಾರುಕೋಲಿನಿಂದ ಬಾರಿಸಿಬಿಟ್ಟ.

ಸಮರ್ಥರಿಗೆ ಯಾರೋ ಒಬ್ಬಾತ ಬಾರುಕೋಲಿನಿಂದ ಹೊಡೆಯುತ್ತಿರುವ ಸುದ್ದಿ ರಾಜನಿಗೆ ಹೋಗಿ ಮುಟ್ಟಿತು. ಅವನು ಗಾಬರಿಯಿಂದ ಕುದುರೆ ಹತ್ತಿ ಸ್ವತಃ ಧಾವಿಸಿಬಂದ. ಬಂದು ಹೊಡೆಯುವುದನ್ನು ನಿಲ್ಲಿಸುವಂತೆ ರೈತನತ್ತ ನೋಡಿ ಗರ್ಜಿಸಿದ. ಸ್ವತಃ ರಾಜನೇ ಬಂದು ಗರ್ಜಿಸಿದ್ದನ್ನು ಕಂಡು ರೈತ ನಡುಗಿಹೋದ. ತನಗೇನು ಶಿಕ್ಷೆ ಕಾದಿದೆಯೋ ಎಂದು ಹೆದರಿಕೆಯಿಂದ ಮುದುಡಿ ಮುದ್ದೆಯಾಗಿಹೋದ.

ರಾಜನು ಸಮರ್ಥರ ಬಳಿ “ಇವನು ನಿಮಗೆ ರಕ್ತ ಬರುವಂತೆ ಹೊಡೆದಿದ್ದಾನಲ್ಲ, ಇವನಿಗೇನು ಶಿಕ್ಷೆ ಕೊಡಬೇಕೆಂದು ಹೇಳಿ. ಅದನ್ನೇ ಕೊಡುತ್ತೇನೆ” ಎಂದು ಅರಿಕೆ ಮಾಡಿಕೊಂಡ. ಅದಕ್ಕೆ ಸಮರ್ಥರು “ದೊರೆಯೇ, ಈ ರೈತನ ಕಂದಾಯವನ್ನು ಮನ್ನಾ ಮಾಡಿಬಿಡು” ಎಂದು ಸೂಚಿಸಿದರು. ಅಲ್ಲಿದ್ದವರೆಲ್ಲರಿಗೂ ಆಶ್ಚರ್ಯವೋ ಆಶ್ಚರ್ಯ. ಆ ರೈತನಂತೂ ಸಮರ್ಥರು ಯಾವ ಕಠಿಣ ಶಿಕ್ಷೆಯನ್ನು ಸೂಚಿಸುವರೋ ಎಂದು ಕಂಗಾಲಾಗಿದ್ದವನು, ತನ್ನ ಕಿವಿಗಳನ್ನೇ ನಂಬದಾದ. ಸ್ವತಃ ರಾಜನಿಗೂ ಇದು ಆಶ್ಚರ್ಯವನ್ನುಂಟುಮಾಡಿತು. ಅವನು ಸಮರ್ಥರನ್ನು ಇದರ ಅರ್ಥವೇನೆಂದು ಕೇಳಿದ.

ಆಗ ಸಮರ್ಥರು ವಿವರಣೆ ಕೊಟ್ಟರು. “ಈ ಬಡಪಾಯಿ ರೈತ ವರ್ಷ ಕಾಲಾವಧಿ ಕಷ್ಟಪಟ್ಟು ಕಬ್ಬು ಬೆಳೆದಿದ್ದಾನೆ. ಅವನ ಹೊರತೂ ಇನ್ನಾರಿಗೂ ಈ ಕಬ್ಬಿನ ಮೇಲೆ ಸ್ವಾಮಿತ್ವ ಇಲ್ಲ. ನಾನು ಅದನ್ನೆಲ್ಲ ಯೋಚಿಸದೇ ಕಬ್ಬು ತಿನ್ನಲು ಶಿಷ್ಯರಿಗೆ ಅನುಮತಿ ಕೊಟ್ಟುಬಿಟ್ಟೆ. ಇದರಿಂದ ರೈತನು ಬಾರುಕೋಲಿನಿಂದ ನನ್ನನ್ನು ಬಾರಿಸಿ ಶಿಕ್ಷಿಸಿದ್ದು ಸರಿಯಾಗೇ ಇದೆ. ಅಷ್ಟೇ ಅಲ್ಲ. ಜೀವನದಲ್ಲಿ ನನಗೆ ಇದೊಂದು ಪಾಠ. ಈ ಪಾಠವನ್ನು ಹೇಳಿಕೊಟ್ಟ ಗುರು ಈ ರೈತ. ಗುರುವಿಗೆ ಗುರುದಕ್ಷಿಣೆ ಅರ್ಪಿಸಬೇಕಾದದ್ದು ನನ್ನ ಧರ್ಮ. ಆದ್ದರಿಂದ ಆತನ ಕಂದಾಯವನ್ನು ಮನ್ನಾ ಮಾಡೆಂದು ಹೇಳಿದೆ” ಎಂದು ಅವರು ಸ್ಪಷ್ಟಪಡಿಸಿದರು.

ಈ ಕಥೆಯನ್ನು ಇಂದು ಸಂಜೆ ನನಗೆ ಹೇಳಿದವರು ನಾಡಿನ ಖ್ಯಾತ ಜ್ಯೋತಿಷಿಗಳೂ, ಬಹುದೊಡ್ಡ ವಿದ್ವಾಂಸರೂ ಆದ ವಯೋವೃದ್ಧರಾದವರೊಬ್ಬರು. ಅವರು ಈ ಕಥೆಯನ್ನು ಹೇಳಿ ಮುಗಿಸಿದಾಗ ನನಗೆ ನೆನಪಾದದ್ದು ಅತ್ಯಾಚಾರಿಯೊಬ್ಬ ಹೇಳಿದ ಅತಿಕಾಯ ಕಾಳಗದ ಕಥೆ.

ಇದು ನಡೆದದ್ದು ಆಗಷ್ಟೇ ಅತ್ಯಾಚಾರ ಪ್ರಕರಣ ಸ್ಪೋಟಗೊಂಡು, ಆರೋಪ ಮಾಡಿದವರು ಅರ್ಥಾತ್ ಕಾನೂನಿನ/ವ್ಯವಹಾರಿಕ ಭಾಷೆಯಲ್ಲಿ ಹೇಳುವುದಾದರೆ ಸಂತ್ರಸ್ಥೆ ಮತ್ತು ಆಕೆಯ ಪತಿ ೨೧ ದಿನಗಳ ಕಾಲ ಸೆರೆಮನೆಯಲ್ಲಿ ಕೊಳೆಯುತ್ತಿದ್ದಾಗಿನ ಸಂದರ್ಭದಲ್ಲಿ. ಆ ಅತ್ಯಾಚಾರಿ ಅತಿಕಾಯ ಕಾಳಗದ ಕಥೆಯನ್ನು ತನ್ನ ಚಾತುರ್ಮಾಸದ ಸಮಾರೋಪದಲ್ಲಿ ವಿವರಿಸತೊಡಗಿದ: “ರಾವಣನ ಮಗ ಅತಿಕಾಯ ಶ್ರೀರಾಮನೊಡನೆ ಯುದ್ಧಕ್ಕೆ ನಿಲ್ಲುತ್ತಾನೆ. ಸತತವಾಗಿ ಬಾಣಗಳ ಸುರಿಮಳೆ ಸುರಿಸುತ್ತಾ ತನ್ನ ಒಂದೊಂದು ಬಾಣಕ್ಕೂ ಒಂದೊಂದು ವ್ಯಂಗ್ಯವನ್ನಾಡುತ್ತಾನೆ. ಇದಂ ಅರ್ಘ್ಯಂ ಎನ್ನುತ್ತಾ ಒಂದು ಬಾಣ, ಇದಂ ಪಾದ್ಯಂ ಎನ್ನುತ್ತಾ ಇನ್ನೊಂದು ಬಾಣ, ಇದಂ ಆಚಮನೀಯಂ ಎನ್ನುತ್ತಾ ಮಗದೊಂದು ಬಾಣ, ಹೀಗೆಯೇ ಬಾಣ ಬಿಡುತ್ತಾ ಹೋಗುತ್ತಾನೆ. ಜೊತೆಗೆ ನಾವು ರಾಕ್ಷಸರು, ಪೂಜೆ ಮಾಡುವ ಪದ್ಧತಿ ಇದು ಎನ್ನುತ್ತ ಮತ್ತೊಮ್ಮೆ ವ್ಯಂಗ್ಯವಾಡುತ್ತಾನೆ. ಆಗ ರಾಮನು, ನೀನು ಪೂಜೆ ಮಾಡಿದ್ದೀಯಲ್ಲ, ಈಗ ನಾನು ನಿನಗೆ ಪ್ರಸಾದ ಕೊಡುತ್ತೇನೆ ಎಂದು ಬಾಣ ಬಿಡುತ್ತಾನೆ. ಅತಿಕಾಯನು ಹತನಾಗುತ್ತಾನೆ. ಅಲ್ಲಿ ರಾಮನು ಮಾಡಿದಂತೆ ಇಲ್ಲಿ ನಾವು ಮಾಡಿದ್ದೇವೆ. ಅವರು ಇಷ್ಟು ದಿನ ನಮಗೆ ಬ್ಲ್ಯಾಕ್ ಮೇಲ್ ಮುಂತಾದ ನಾನಾ ರೀತಿಯ ಬಾಣ ಬಿಡುತ್ತಿದ್ದರು. ಈಗ ನೋಡಿ, ನಾವೊಂದು ಬಾಣ ಬಿಟ್ಟು ಅವರು ಸೆರೆಮನೆಯಲ್ಲಿರುವಂತೆ ಮಾಡಿದ್ದೇವೆ!”

ತುಮರಿಯವರು ತಮ್ಮ ಲೇಖನಗಳಲ್ಲಿ ಹೇಳುವಂತೆ ಕುರಿಗಳು ಹಿಕ್ಕೆಯುದುರಿಸಿದಂತೆ ಚಪ್ಪಾಳೆ ಬಂತು.

ನಾನಿದನ್ನು ವ್ಯಂಗ್ಯಕ್ಕಾಗಿ, ಲೇವಡಿಗಾಗಿ, ಹೀಯಾಳಿಕೆಗಾಗಿ ಬರೆದಿದ್ದಲ್ಲ. ಯಾರಿಗೂ ಸೇಡು, ದ್ವೇಷಭಾವ ಇರಬಾರದು ಎನ್ನುತ್ತದೆ ನಮ್ಮ ಅಧ್ಯಾತ್ಮ. ಮನುಸ್ಮೃತಿಯಲ್ಲಿ ಬರುವ ಧರ್ಮದ ಹತ್ತು ಲಕ್ಷಣಗಳಲ್ಲಿ ಕ್ಷಮೆ ಮತ್ತು ಅಕ್ರೋಧ ಕೂಡ ಇವೆ. ಅದರಲ್ಲೂ ಕಾವಿ ಹಾಕಿದವನಿಗೆ ಸಿಟ್ಟು-ಸೇಡಿನ ಮನೋಭಾವ ಇರಲೇಕೂಡದು. ಆದರೆ ಇಲ್ಲಿ? ಧರ್ಮಪೀಠದ ಮೇಲೆ ಕುಳಿತವನೇ, ಸಿಟ್ಟು-ಸೇಡಿನ ಅಧರ್ಮದ ಹಾದಿ ಹಿಡಿದಿದ್ದಾನೆ! ಹಾಗೆ ನೋಡಿದರೆ ಬ್ಲ್ಯಾಕ್ ಮೇಲ್ ಎಂಬುದು ಕೂಡ ಒಂದು ಕಟ್ಟುಕಥೆ ಎನ್ನುವುದು ಶೀಘ್ರದಲ್ಲಿಯೇ ಗೊತ್ತಾಗಲಿದೆ. ಅದಿರಲಿ, ಆದರೆ ಬುದ್ಧಿವಂತ ಸಮಾಜ ತಾನೆಂದು ಬೀಗುವ ಈ ಸಮಾಜ ಈತ ಅತಿಕಾಯ ಕಾಳಗದ ಕಥೆ ಹೇಳಿದಾಗಲೇ ಅರ್ಥ ಮಾಡಿಕೊಳ್ಳಬೇಕಿತ್ತು, ಈತನಲ್ಲಿ ಅರಿಷಡ್ವರ್ಗಗಳು ಮನೆ ಮಾಡಿವೆ, ಈತ ಆ ಘನಪೀಠದ ಮೇಲೆ ಕೂಡ್ರಲು ಯೋಗ್ಯನಲ್ಲ ಎಂದು.

ಬದಲಿಗೆ ಈಗಲೂ, ಇಷ್ಟೆಲ್ಲ ಸಾಕ್ಷಿಗಳು ಬಹಿರಂಗಗೊಂಡ ಮೇಲೆಯೂ ಕುರಿಗಳಂತೆ ಮ್ಯಾಂ ಮ್ಯಾಂ ಎಂಬಂತೆ ವರ್ತಿಸುತ್ತಾರಲ್ಲ ಹಲವರು?! ಸಮರ್ಥ ರಾಮದಾಸರನ್ನೋ, ಅವರ ಶಿಷ್ಯರಾದ ಶ್ರೀಧರ ಸ್ವಾಮಿಗಳನ್ನೋ ಯಾಕೆ ನೆನೆಸಿಕೊಳ್ಳುತ್ತಿಲ್ಲ ಈ ಮಂದೆ?

source: https://www.facebook.com/sachchidananda.hegde/posts/1720837678132849

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s