ಆಕೆಯ ತ್ಯಾಗ ದೊಡ್ಡದು ಎಂದ ಸಮಾಜದ ಹಿರಿಯರು!

ಆಕೆಯ ತ್ಯಾಗ ದೊಡ್ಡದು ಎಂದ ಸಮಾಜದ ಹಿರಿಯರು!
ಎರಡು ದಿನಗಳ ಹಿಂದೆ ನಾನು ಈ ತಾಣದಲ್ಲಿ “ಒಬ್ಬ ಪೀಠಾಧಿಪತಿ ಮತ್ತು ಒಬ್ಬ ಮಹಿಳೆಯ ನಡುವಿನ ಸಂಬಂಧವನ್ನು ವಿಶ್ಲೇಷಿಸುವುದು ಹೇಗೆ?” ಎಂದು ಬರೆದಿದಿದ್ದನಷ್ಟೆ. ಅದನ್ನೋದಿದ ಹಿರಿಯ ಸಾಮಾಜಿಕ ಕಾರ್ಯಕರ್ತರೊಬ್ಬರು ನಾನು ಅತ್ಯಾಚಾರಕ್ಕೊಳಪಟ್ಟ ಮಹಿಳೆಯೂ ತಪ್ಪು ಮಾಡಿರುವುಳೆಂದು ಅರ್ಥ ಬರುವ ರೀತಿಯಲ್ಲಿ ಬರೆದಿರುವುದಕ್ಕೆ ತಮ್ಮ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. “ನೀವು ಆಕೆಗೂ ಶಿಕ್ಷೆ ವಿಧಿಸಿಬಿಟ್ಟಿದ್ದೀರಿ” – ಇದು ಅವರು ನನ್ನ ಬಳಿ ಹೇಳಿದ ಮೊದಲ ವಾಕ್ಯ. ಆ ಬಳಿಕ ಅವರು ತಮ್ಮ ಆಕ್ಷೇಪವನ್ನು ವಿವರಿಸಿದರು.
ಅವರ ವಿವರಣೆ ಹೀಗಿತ್ತು – ಮಹಿಳೆಯರು ಪುರುಷರಿಗಿಂತ ಹೆಚ್ಚು ಭಾವಜೀವಿಗಳು. ಅದರಲ್ಲೂ ಸಂಗೀತಗಾರ್ತಿಯರಾದ ಮಹಿಳೆಯರು ಇತರ ಮಹಿಳೆಯರಿಗಿಂತ ಒಂದು ತೂಕ ಹೆಚ್ಚೇ ಭಾವಜೀವಿಗಳು. ಏಕೆಂದರೆ ಅವರು ಭಾವ ತುಂಬಿ ಹಾಡಿದಾಗ ಮಾತ್ರ ಅವರ ಹಾಡಿಗೆ ಜೀವಂತಿಕೆ ಬರುತ್ತದೆ. ಹಾಡಿನ ಭಾವವನ್ನು ಅನುಭವಿಸಿ ಅವರು ಹಾಡುವುದರಿಂದ ಕೇಳುಗರ ಹೃದಯವನ್ನು ಅವರು ತಟ್ಟುತ್ತಾರೆ. ಅಂಥ ಹೆಣ್ಣುಮಕ್ಕಳು ಭಾವ ಲಹರಿಗೆ ಬಹುಬೇಗ ಸಿಲುಕಿಬಿಡುತ್ತಾರೆ. ಅಂಥವರನ್ನು ಭಾವನಾತ್ಮಕವಾಗಿ ಬಂಧಿಸುವುದು ಸುಲಭ.
ಬಹುಶಃ ಈ ಹೆಣ್ಣುಮಗಳೂ ಸಹ ಅಂಥ ಭಾವನಾತ್ಮಕ ಬಂಧನಕ್ಕೆ ಸಿಲುಕಿದ ಸಂದರ್ಭದಲ್ಲಿ ಆತ ಅವಳ ಮೇಲೆ ಅತ್ಯಾಚಾರ ಮಾಡಿದ್ದಾನೆ. ಆದ್ದರಿಂದ ಆಕೆ ತಪ್ಪು ಮಾಡಿದ ಹಾಗಾಗಲಿಲ್ಲ. ಆದರೆ ಆಕೆಯನ್ನು ಭಾವಬಂಧನ(Emotional blackmail)ದಲ್ಲಿ ಬಂಧಿಸಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದು ಆತ ಮಾಡಿದ ಮಹಾಪರಾಧ.
ಈ ವಿಚಾರಕ್ಕೆ ಇನ್ನೂ ಒಂದು ಆಯಾಮವಿದೆ. ಇಂಥ ಎಷ್ಟೋ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರಗಳು ಸಮಾಜದಲ್ಲಿ ನಡೆಯುತ್ತಿರುತ್ತವೆ. ಆದರೆ ಬಹುತೇಕ ಹೆಣ್ಣುಮಕ್ಕಳು ಇದನ್ನು ಬಾಯಿ ಬಿಡುವುದೇ ಇಲ್ಲ. ಅವರ ಈ ದೌರ್ಬಲ್ಯವನ್ನು ದುರುಪಯೋಗಪಡಿಸಿಕೊಳ್ಳುವ ಅತ್ಯಾಚಾರಿಗಳು ತಮ್ಮ ಅತ್ಯಾಚಾರ ಪ್ರವೃತ್ತಿಯನ್ನು ಎಗ್ಗಿಲ್ಲದೇ ಮುಂದುವರಿಸುತ್ತಾರೆ. ಅದರಲ್ಲೂ ಅತ್ಯಾಚಾರಿಯು ಒಂದು ಪೀಠದ ಪೀಠಾಧಿಪತಿಯಾಗಿದ್ದರೆ ಹೆಣ್ಣುಮಕ್ಕಳನ್ನು ಗುರುಭಕ್ತಿಯ ಹೆಸರಿನಲ್ಲಿ, ದೇವರ ಹೆಸರಿನಲ್ಲಿ ಭಾವಬಂಧನದಲ್ಲಿ ಬಂಧಿಸುವುದು ಬಹಳ ಸುಲಭ. ಆ ರೀತಿ ಅತ್ಯಾಚಾರಕ್ಕೊಳಗಾದ ಹೆಣ್ಣುಮಕ್ಕಳು ಪೀಠಾಧಿಪತಿಯ ಭಯದಿಂದ ತುಟಿ ಪಿಟಕ್ ಎನ್ನುವುದಿಲ್ಲ.
ಆದರೆ ಈ ಹೆಣ್ಣುಮಗಳು ಇಡೀ ಸಮಾಜದ ಹಿತವನ್ನು ಗಮನದಲ್ಲಿಟ್ಟುಕೊಂಡು ಈತನ ಆಷಾಢಭೂತಿ ವ್ಯಕ್ತಿತ್ವವನ್ನು ಬಯಲಿಗೆಳೆದಿದ್ದಾಳೆ. ತಾನಂತೂ ಈತನ ಕಾಮತೃಷೆಗೆ ಬಲಿಯಾದೆ. ಇನ್ನುಳಿದ ಹೆಣ್ಣುಮಕ್ಕಳಾದರೂ ಬಲಿಯಾಗದಿರಲಿ ಮತ್ತು ಈತನ ಕುರಿತು ಸಮಾಜ ಎಚ್ಚರಗೊಳ್ಳಲಿ ಎಂಬ ಸದಸದ್ವಿವೇಕದಿಂದ ಈತನ ನಿಗೂಢ ಲೈಂಗಿಕ ಕಾರ್ಯಾಚರಣೆಗಳನ್ನು ಸ್ಫೋಟಿಸಿದ್ದಾಳೆ.
ಹೀಗೆ ಈತನ ವಿಷಯವಾಸನೆಯ ವಿಷಯವನ್ನು ಬಹಿರಂಗಗೊಳಿಸುವುದರಿಂದ ತಾನು ಎಲ್ಲ ರೀತಿಯ ಅಪಮಾನ, ದೌರ್ಜನ್ಯ, ಅವಹೇಳನ, ಕಿರುಕುಳ, ಹೀಯಾಳಿಕೆ, ನಿಂದನೆ ಇತ್ಯಾದಿಗಳನ್ನು ಎದುರಿಸಬೇಕಾಗುತ್ತದೆಂದು ಗೊತ್ತಿದ್ದರೂ ಹೆದರಿಕೊಂಡು ಮೌನವಾಗಿ ಕುಳಿತುಕೊಳ್ಳಲಿಲ್ಲ. ಜೀವಬೆದರಿಕೆಗೂ ಜಗ್ಗಲಿಲ್ಲ. ಎಲ್ಲವನ್ನೂ ಪಣಕ್ಕೊಡ್ಡಿ ಈತನ ಕಾಮದಾಟಗಳನ್ನು ಸಮಾಜದ ಮುಂದಿಟ್ಟಳು. ಆದ್ದರಿಂದ ಆಕೆಯ ತ್ಯಾಗ ಸಾಮಾನ್ಯದ್ದಲ್ಲ; ಅದು ಮಹಾತ್ಯಾಗ.
ಇಷ್ಟಾಗಿ ಆಕೆ ಶಿಕ್ಷೆಯನ್ನೂ ಅನುಭವಿಸಿಬಿಟ್ಟಿದ್ದಾಳೆ. ಕೇಳಬಾರದ ಅಪಮಾನಕರ ಮಾತುಗಳನ್ನು ಕೇಳಿಸಿಕೊಂಡಿದ್ದಾಳೆ. ಎಲ್ಲ ರೀತಿಯ ಮಾನಸಿಕ ಹಿಂಸೆಯನ್ನು, ಕಿರುಕುಳವನ್ನು, ವಿನಾಕಾರಣ ೨೧ ದಿನಗಳ ಬಂಧನವನ್ನು ಅನುಭವಿಸಿದ್ದಾಳೆ. ಈಗ ಶಿಕ್ಷೆ ಆಗಬೇಕಾದುದು ಆತನಿಗೆ; ಆಕೆಗಲ್ಲ. ಆದ್ದರಿಂದ ನಿಮ್ಮ ಬರಹ ಸರಿಯಲ್ಲ.
ಅಂಥ ತ್ಯಾಗಮಯಿ ಹೆಣ್ಣುಮಗಳನ್ನು ನೀವು ತಪ್ಪುಗಾರಳ ಸ್ಥಾನದಲ್ಲಿ ನಿಲ್ಲಿಸಿದ್ದೀರಲ್ಲ? ಇದು ಸರಿಯೇ?
-ಇದು ಆ ಹಿರಿಯ ಸಾಮಾಜಿಕ ಕಾರ್ಯಕರ್ತರ ಪ್ರಶ್ನೆ.
ಈ ಪ್ರಶ್ನೆ ನನಗೂ ಸರಿಯೆನಿಸಿತು. ನನ್ನ ತಪ್ಪನ್ನು ನಾನು ಸರಿಪಡಿಸಿಕೊಳ್ಳಬೇಕೆನಿಸಿತು. ಆದ್ದರಿಂದ ಅವರ ಈ ಅಭಿಪ್ರಾಯವನ್ನೇ ಬರಹ ರೂಪದಲ್ಲಿ ತಂದು ನನ್ನ ತಪ್ಪನ್ನು ತಿದ್ದಿಕೊಳ್ಳುವ ಪ್ರಯತ್ನ ಮಾಡಿದ್ದೇನೆ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s