ಒಬ್ಬ ಪೀಠಾಧಿಪತಿ ಮತ್ತು ಒಬ್ಬ ಮಹಿಳೆಯ ನಡುವಿನ ಸಂಬಂಧವನ್ನು ವಿಶ್ಲೇಷಿಸುವುದು ಹೇಗೆ?

ಒಬ್ಬ ಪೀಠಾಧಿಪತಿ ಮತ್ತು ಒಬ್ಬ ಮಹಿಳೆಯ ನಡುವಿನ ಸಂಬಂಧವನ್ನು ವಿಶ್ಲೇಷಿಸುವುದು ಹೇಗೆ?

ಮಾರ್ಚ್ ೩೧ರಂದು ಬಂದ ತೀರ್ಪನ್ನು ಜನರು ತಮತಮಗೆ ತೋಚಿದ ರೀತಿಯಲ್ಲಿ ವಿಶ್ಲೇಷಿಸಿದ್ದಾರೆ, ಅರ್ಥೈಸುತ್ತಿದ್ದಾರೆ. ಆದರೆ ಹೀಗೆ ವಿಶ್ಲೇಷಿಸುವಾಗ ಅದಕ್ಕೊಂದು ವೈಚಾರಿಕ ನೆಲೆಗಟ್ಟು, ಒಂದು ಸೈದ್ಧಾಂತಿಕ ಮಾಪನ, ಕಾನೂನಿನ ದೃಷ್ಟಿ, ನೈತಿಕತೆಯ ಮಾನ್ಯತೆ ಮತ್ತು ಸಾಮಾಜಿಕ ಸಮ್ಮತಿ ಇರಬೇಕಾಗುತ್ತದೆ. ಇವುಗಳ ಕೊರತೆಯಿಂದ ನಡೆಸುವ ಯಾವುದೇ ಚರ್ಚೆಗೆ ತೂಕವಿರುವುದಿಲ್ಲ. ಅದು ಬಾಯಿಚಪಲಕ್ಕೆ ನಡೆಸುವ ಕಾಡುಹರಟೆಗೆ ಸಮ.

ಅಗ್ನಿ, ಜ್ವಾಲಾಮುಖಿ ಮುಂತಾದ ಪತ್ರಿಕೆಗಳಲ್ಲಿ ತಟಸ್ಥ ಧೋರಣೆಯವರೆಂದು ಹೇಳಿಕೊಂಡವರ ಲೇಖನಗಳು ಪ್ರಕಟವಾಗಿವೆ. ಎಲ್ಲ ಮಾಧ್ಯಮಗಳೂ ಅತ್ಯಾಚಾರದ ಆಪಾದನೆ ಹೊತ್ತವರ ಬಗ್ಗೆ ವೈಭವೀಕರಿಸುವ ಪ್ರಚಾರದಲ್ಲಿ ತೊಡಗಿರುವಾಗ ಈ ಪತ್ರಿಕೆಗಳು ಅಂತಹ ನೀಚ ಕೆಲಸಕ್ಕೆ ತೊಡಗದೇ ಅತ್ಯಾಚಾರವನ್ನು ನಿರ್ಬಿಢೆಯಿಂದ ಖಂಡಿಸುವ ಲೇಖನಗಳನ್ನು ಪ್ರಕಟಿಸಿವೆ. ಅಷ್ಟರಮಟ್ಟಿಗೆ ಅವುಗಳನ್ನು ಮತ್ತು ಆ ಲೇಖನಗಳನ್ನು ಬರೆದವರನ್ನು ನಾನು ಅಭಿನಂದಿಸಲೇಬೇಕು. ಹಲವು ಮಾಧ್ಯಮಗಳು ಮತ್ತು ಅವುಗಳನ್ನು ನಡೆಸುವವರು ಅತ್ಯಾಚಾರಿ ಮತ್ತು ಆತನ ಬೆಂಬಲಿಗರಿಂದ ಖರೀದಿಸಲ್ಪಟ್ಟಿರುವುದನ್ನು ತಿಳಿದುಕೊಳ್ಳಲು ತೀರ ಜಾಣ್ಮೆಯೇನೂ ಬೇಕಾಗಿಲ್ಲ. ಸಾಧಾರಣ ಲೋಕಜ್ನಾನವಿದ್ದರೆ ಸಾಕು. ಆದರೆ ಈ ಪ್ರಕರಣಕ್ಕೆ ಸಂಬಂಧಿಸಿ ಹಾಯ್ ಬೆಂಗಳೂರು, ಅಗ್ನಿ, ಜ್ವಾಲಾಮುಖಿ, ಪ್ರಜಾವಾಣಿ, ಪಬ್ಲಿಕ್ ಟಿವಿ, ಕನ್ನಡಪ್ರಭ, ಕನ್ನಡ ಜನಾಂತರಂಗ, ಕರಾವಳಿ ಅಲೆ ಇತ್ಯಾದಿ ಮಾಧ್ಯಮಗಳು ಯಾವ ಆಮಿಷಕ್ಕೂ ಬಗ್ಗದೇ, ಯಾವ ಬೆದರಿಕೆಗೂ ಜಗ್ಗದೇ ಮತ್ತು ಯಾವ ವ್ಯವಹಾರಿಕ ಒತ್ತಡಗಳನ್ನೂ ಲೆಕ್ಕಿಸದೇ ಖಂಡಿತವಾದ ಧ್ವನಿಯಲ್ಲಿ ವರದಿ ಮಾಡುತ್ತಿರುವುದು ಸತ್ಯ, ಧರ್ಮ ಮತ್ತು ನ್ಯಾಯದಲ್ಲಿ ನಂಬಿಕೆ ಇರುವವರೆಲ್ಲರಿಗೂ ಆಶಾದಾಯಕವಾಗಿದೆ.

ಆದರೆ ಇಲ್ಲೊಂದು ಸೂಕ್ಷ್ಮವಿದೆ. ಈ ಪೈಕಿ ಕೆಲವು ಲೇಖನಗಳಲ್ಲಿ ಅತ್ಯಾಚಾರಿ ಹಾಗೂ ಅತ್ಯಾಚಾರಕ್ಕೊಳಗಾದ ಮಹಿಳೆ ಇಬ್ಬರನ್ನೂ ಒಂದೇ ತಕ್ಕಡಿಯಲ್ಲಿ ತೂಗಲಾಗಿದೆ. ಅವರಿಬ್ಬರನ್ನೂ ಸಮಾನ ತಪ್ಪುಗಾರರೆಂದು ಬಿಂಬಿಸಲಾಗಿದೆ. ಈ ಲೇಖನಗಳ ಇಂತಹ ನಿಲುವಿಗೆ ಕಾರಣ ತೀರ್ಪಿನಲ್ಲಿ ಅತ್ಯಾಚಾರದ ಆರೋಪವನ್ನು ಅಲ್ಲಗಳೆದು, ಏನು ನಡೆದಿದೆಯೋ ಅದನ್ನು “ಶೀಲಗೆಟ್ಟ ಸಂಬಂಧ”ವೆಂದು ತೀರ್ಮಾನಿಸಿರುವುದು. ಈ ತೀರ್ಪನ್ನು ಈಗ ಉಚ್ಚನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿರುವುದರಿಂದ ಈ ಪ್ರಕರಣದ ಚರ್ಚೆಗೆ ಹೆಚ್ಚು ಸ್ವಾತಂತ್ರ್ಯ ಲಭಿಸಿದಂತಾಗಿದೆ.

ತನ್ನ ಮೇಲಾಗಿರುವುದು ಅತ್ಯಾಚಾರವೆಂದು ಆಕೆಯ ವಾದ. ತೀರ್ಪನ್ನು ರದ್ದುಗೊಳಿಸಬೇಕೆಂದು ಕೋರಿ ಸರಕಾರವೇ ಉಚ್ಚನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿರುವುದರಿಂದ ಸರಕಾರ ಆಕೆಯ ವಾದವನ್ನು ಸಮರ್ಥಿಸಿದಂತಾಗಿದೆ. ಆದರೆ ಅದು ಅತ್ಯಾಚಾರವಲ್ಲ, ಶೀಲಗೆಟ್ಟ ಸಂಬಂಧವೆಂದು ತೀರ್ಪು ಹೇಳುತ್ತದೆ. ಇಷ್ಟಾಗಿಯೂ ಏನೂ ನಡೆಯಲೇ ಇಲ್ಲವೆಂದು ಅತ್ಯಾಚಾರಿ ಮತ್ತು ಆತನ ಬೆಂಬಲಿಗರು ಬೋಂಗು ಬಿಡುತ್ತಿರುವರಾದರೂ, ಅವರು ಈ ತೀರ್ಪು ಬಂದಾಕ್ಷಣ ಎಲ್ಲ ಕಡೆ ಪಟಾಕಿ ಸಿಡಿಸಿ, ಮೆರವಣಿಗೆ ನಡೆಸಿ ಸಂಭ್ರಮ ಆಚರಿಸಿ ತೀರ್ಪನ್ನು ಸ್ವಾಗತಿಸಿರುವುದರಿಂದ ಪ್ರತ್ಯಕ್ಷದಲ್ಲಿ ಅವರು ಆ ತೀರ್ಪನ್ನು ಒಪ್ಪಿಕೊಂಡಂತಾಗಿದೆ. ಅಲ್ಲಿಗೆ ಅವರು ಶೀಲಗೆಟ್ಟ ಸಂಬಂಧವಿತ್ತೆಂಬುದನ್ನು ಸಮ್ಮತಿಸಿದಂತಾಗಿದೆ.

ಅಥವಾ ಅವರು ತಾವು ಸಂಭ್ರಮಿಸಿದ್ದು ಕೇವಲ ತೀರ್ಪಿನ ೮೦ನೇ ಪುಟದವರೆಗೆ ಮಾತ್ರ ಎಂದು ಹೇಳಿದ್ದಾರೆಯೇ ? ಇಲ್ಲ, ಇಲ್ಲಿಯವರೆಗೆ ಅಂತಹ ಯಾವ ಹೇಳಿಕೆಯೂ ಅತ್ಯಾಚಾರಿ ಮತ್ತು ಆತನ ಬೆಂಬಲಿಗರಿಂದ ಬಂದಿಲ್ಲ. ಅಲ್ಲಿಗೆ ಅವರು ತೀರ್ಪನ್ನು ಪೂರ್ಣ ಪ್ರಮಾಣದಲ್ಲಿ ಒಪ್ಪಿಕೊಂಡಂತಾಯಿತು.

ಹಾಗಾದರೆ ಇದು ಅತ್ಯಾಚಾರವೇ ಅಥವಾ ಶೀಲಗೆಟ್ಟ ಸಂಬಂಧವೇ ಎಂಬ ಪ್ರಶ್ನೆ ಜೀವಂತವಾಗಿ ಉಳಿಯಿತು ಮತ್ತು ಉಚ್ಚನ್ಯಾಯಾಲಯ ಈ ಬಗ್ಗೆ ಏನು ನಿರ್ಣಯ ನೀಡುತ್ತದೆ ಎಂದು ಕಾಯುವಂತಾಯಿತು. ಇರಲಿ, ಅದು ನನ್ನ ಈ ಲೇಖನದ ಕೇಂದ್ರಬಿಂದುವಲ್ಲ.

ನನ್ನ ಲೇಖನದ ಪ್ರಧಾನ ಪ್ರಶ್ನೆ ಏನೆಂದರೆ ಒಬ್ಬ ಪೀಠಾಧಿಪತಿ ಮತ್ತು ಆತನ ಶಿಷ್ಯವರ್ಗಕ್ಕೆ ಸೇರಿದ ಓರ್ವ ಮಹಿಳೆ ಇವರಿಬ್ಬರ ನಡುವಿನ ದೈಹಿಕ ಸಂಬಂಧವನ್ನು ಯಾವ ರೀತಿ ವಿಶ್ಲೇಷಿಸಬೇಕು ಎನ್ನುವುದು.

ಒಬ್ಬ ಪೀಠಾಧಿಪತಿ ಅಥವಾ ಮಠಾಧಿಪತಿ ಎಂದರೆ ಆತ ಸಮಾಜಕ್ಕೆ ನೈತಿಕ ಮತ್ತು ಧಾರ್ಮಿಕ ಮಾರ್ಗದರ್ಶಕ. ಕಾನೂನು ಮತ್ತು ಲೌಕಿಕ ವ್ಯವಹಾರವನ್ನು ಹೊರತುಪಡಿಸಿ ಜೀವನದ ಉಳಿದೆಲ್ಲ ವಿಚಾರಗಳಲ್ಲಿ ವ್ಯಕ್ತಿಗಳು ಯಾವ ಹಾದಿಯಲ್ಲಿ ನಡೆಯಬೇಕು ಎಂದು ನಿರ್ದೇಶಿಸುವ ಸ್ಥಾನದಲ್ಲಿರುವವರು. ಅಂಥ ವ್ಯಕ್ತಿ ಒಬ್ಬ ಹೆಣ್ಣಿನ ಜೊತೆ ದೈಹಿಕ ಸಂಬಂಧ ಬೆಳೆಸುವುದಿರಲಿ, ಸಲುಗೆಯಿಂದ ನಡೆದುಕೊಳ್ಳುವುದು, ಸ್ಪರ್ಶಿಸುವುದು ಕೂಡ ಮಹಾಪರಾಧ. ಇಲ್ಲಿ ತೀರ್ಪಿನ ಪ್ರಕಾರವೇ ಆತ ಆಕೆಯ ಜತೆ ಶೀಲಗೆಟ್ಟ ಸಂಬಂಧ ಹೊಂದಿರುವುದು ಸಾಬೀತಾಗಿದೆ. ಆದ್ದರಿಂದ ಆತ ಮಾಡಿದ ಅಪರಾಧಕ್ಕೆ ಎಣೆಯೇ ಇಲ್ಲ.

ಹಾಗಾದರೆ ಆಕೆಯದೇನೂ ತಪ್ಪಿಲ್ಲವೇ? ನಿಜ, ಆಕೆ ತಪ್ಪು ಮಾಡಿಲ್ಲ ಎಂದು ನಾನು ಹೇಳುವುದಿಲ್ಲ. ಆದರೆ ಆಕೆ ಮಾಡಿದ ತಪ್ಪು ಮತ್ತು ಈತ ಮಾಡಿದ ತಪ್ಪು ಒಂದೇ ಪ್ರಮಾಣದ್ದಲ್ಲ. ಆಕೆಯ ತಪ್ಪಿನ ಸಾವಿರ ಪಟ್ಟು ಗುರುತರವಾದುದು ಈತ ಮಾಡಿದ ಅಪರಾಧ. ಕೇವಲ ಅಪರಾಧವಲ್ಲ, ಮಹಾಪರಾಧ, ಘೋರ ಅಪರಾಧ. ಆದ್ದರಿಂದ ಶಿಕ್ಷೆ ನೀಡುವಲ್ಲಿ ನೈತಿಕತೆಯೇ ಆಧಾರವಾಗುವುದಾದರೆ ಆಕೆಗೆ ನೀಡಿದ ಶಿಕ್ಷೆಯ ಸಾವಿರ ಪಟ್ಟು ಜಾಸ್ತಿ ಶಿಕ್ಷೆಯನ್ನು ಈತನಿಗೆ ನೀಡಬೇಕು. (ಕಾನೂನು ನೈತಿಕತೆಯನ್ನು ಅಷ್ಟಾಗಿ ಪರಿಗಣಿಸುವುದಿಲ್ಲವಾದ್ದರಿಂದ ಒಂದುವೇಳೆ ಆತ ಮಾಡಿದ್ದು ಅತ್ಯಾಚಾರವೆಂದೇ ಸಾಬೀತಾದರೂ ಸಮಾಜ ಮತ್ತು ಶಾಸ್ತ್ರವಚನಗಳು ಅಪೇಕ್ಷಿಸುವಷ್ಟು ಶಿಕ್ಷೆ ಆತನಿಗೆ ಆಗಲಿಕ್ಕಿಲ್ಲ.)

ಆಕೆ ಒಬ್ಬ ಖಾಸಗಿ ವ್ಯಕ್ತಿ. ಆಕೆಯಿಂದ ಸಮಾಜಕ್ಕೆ ಯಾವ ಲೇಣೆ-ದೇಣೆಯೂ ಇಲ್ಲ. ಕಾನೂನು, ನೀತಿ, ವೈಚಾರಿಕತೆ, ವ್ಯವಹಾರಿಕತೆ ಎಲ್ಲವೂ ಆಕೆಯ ಖಾಸಗೀ ಬದುಕನ್ನು ಮಾನ್ಯ ಮಾಡುತ್ತವೆ. ಆಕೆ ತನ್ನ ಸತಿಧರ್ಮ ತಪ್ಪಿ ನಡೆದರೆ ಅದು ಆಕೆಯ ಕುಟುಂಬವರ್ಗದ ನಿರ್ಣಯದ ವ್ಯಾಪ್ತಿಯೊಳಗೆ ಬರುತ್ತದೆ. ಆಕೆಯ ಬದುಕಿಗೆ ಸಮಾಜ ಕೊಡಬೇಕಾದುದೇನೂ ಇಲ್ಲ. ಸಮಾಜ ತೀರ್ಮಾನಿಸಬೇಕಾದುದೇನೂ ಇಲ್ಲ.

ಆದರೆ ಒಬ್ಬ ಪೀಠಾಧಿಪತಿಯ ವಿಚಾರ ಹಾಗಲ್ಲ. ಆತನಿಗೆ ಜನರು ಸಾಷ್ಟಾಂಗ ನಮಸ್ಕಾರ ಮಾಡುತ್ತಾರೆ. ಆತನ ಪೀಠಕ್ಕೆ ಮನೆ ಹಣ ಕೊಡುತ್ತಾರೆ. ಆತನ ಇಡೀ ಸಂಸ್ಥಾನ ಸಾರ್ವಜನಿಕ ಹಣದಿಂದಲೇ ನಡೆಯುತ್ತದೆ. ಜನರು ನೀಡುವ ಭಿಕ್ಷೆಯಿಂದಲೇ ಆತನ ಹೊಟ್ಟೆಗೆ ಆಹಾರ ಬೀಳಬೇಕು. ಆದ್ದರಿಂದ ಆತ ಖಾಸಗೀ ವ್ಯಕ್ತಿಯಲ್ಲ. ಆತನನ್ನು ಪ್ರಶ್ನಿಸುವ ನೈತಿಕ ಹಕ್ಕು ಸಮಾಜದ ಪ್ರತಿಯೊಬ್ಬ ವ್ಯಕ್ತಿಗೂ ಇರುತ್ತದೆ. (ನಾನೂ ಈ ಹಿಂದೆ ನಮಸ್ಕಾರ ಮಾಡುವಾಗ ಪಾದಗಾಣಿಕೆ ಹಾಕಿಯೇ ನಮಸ್ಕಾರ ಮಾಡಿರುವುದರಿಂದ ನನಗೂ ಖಂಡಿತ ಆತನನ್ನು ಪ್ರಶ್ನಿಸುವ ಎಲ್ಲ ಹಕ್ಕೂ ಇದೆ.)

ಪೀಠಾಧಿಪತಿ ಸ್ವೇಚ್ಛಾಚಾರಿ ಆಗಬಾರದು. ಹಾಗೆ ಆದರೆ ಆತನನ್ನು ಎಳೆದುಬಿಡುವ ಕರ್ತವ್ಯ ಶಿಷ್ಯರದ್ದಾಗುತ್ತದೆ. ಆಚಾರ್ಯ ಶಂಕರರೇ ಈ ಆದೇಶ ನೀಡಿದ್ದಾರೆ. ಈ ಎಲ್ಲ ಕಾರಣಗಳಿಂದ ಆತ ಮತ್ತು ಆಕೆ ಸಮಾನರಲ್ಲ. ಅವರುಗಳು ಎಸಗಿದ ತಪ್ಪು-ಅಪರಾಧಗಳೂ ಸಮಾನವಲ್ಲ.

ಇದು ಶೀಲಗೆಟ್ಟ ಸಂಬಂಧ ಎಂಬುದನ್ನು ನನ್ನ ಮನಸ್ಸು ಒಪ್ಪಿಕೊಳ್ಳುತ್ತಿಲ್ಲ. ಇದು ಅತ್ಯಾಚಾರವೇ ಸರಿ ಎನ್ನುವುದು ನನ್ನ ಅಂತರಾತ್ಮದ ಧ್ವನಿ. ಆದರೆ ಇದು ಅತ್ಯಾಚಾರವಾಗಲೀ ಅಥವಾ ಒಂದುವೇಳೆ ಶೀಲಗೆಟ್ಟ ಸಂಬಂಧವೇ ಆಗಿರಲಿ, ಘೋರ ಅಪರಾಧಿ, ಮಹಾಪರಾಧಿ ಆತನೇ ಆಗಿದ್ದಾನೆ.

source: https://www.facebook.com/sachchidananda.hegde/posts/1715681005315183

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s