ಅಂಕುಡೊಂಕು ತಿದ್ದಬೇಕಾದವರೇ ಹಿಂಗೆ ಮಾಡಿದ್ರೆ ಹೆಂಗೆ?

ಅಂಕುಡೊಂಕು ತಿದ್ದಬೇಕಾದವರೇ ಹಿಂಗೆ ಮಾಡಿದ್ರೆ ಹೆಂಗೆ?

ಯಾವುದು ಸಮಾಜ ಕಾಪಾಡುತ್ತದೆಯೋ, ಎಲ್ಲರ ಪ್ರಗತಿಗೆ ಪೂರಕವಾಗುತ್ತದೆಯೋ, ಸಾಮಾಜಿಕ ವ್ಯವಸ್ಥೆಯನ್ನು ಎತ್ತಿ ಹಿಡಿಯುತ್ತದೆಯೋ ಅದೇ ಧರ್ಮ”. ಇದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರ ಸವಿನುಡಿ. ಈ ವಾಕ್ಯಗಳು ಇಂದಿನ ನಮ್ಮ ಧಾರ್ಮಿಕ, ಸಾಮಾಜಿಕ ವ್ಯವಸ್ಥೆಯ ಮುಖಕ್ಕೆ ಕನ್ನಡಿ ಹಿಡಿದಂತಿದೆ.

ಧರ್ಮವನ್ನು ಯಾರು ರಕ್ಷಿಸಬೇಕೋ, ಮೌಲ್ಯಯುತ ಸಮಾಜದ ನಿರ್ಮಾಣ ಮಾಡಬೇಕೋ, ತಮ್ಮ ನಡೆನುಡಿಯಲ್ಲಿ ಮೇಲ್ಪಂಕ್ತಿ ಅನುಸರಿಸಬೇಕೋ ಅಂಥವರು ಧರ್ಮದ ಹೆಸರಿನಲ್ಲಿ ಅಧರ್ಮ ಮಾಡುತ್ತಿದ್ದಾರೆ. ಸಮಾಜದ ಮೌಢ್ಯತೆಯನ್ನು ತೊಳೆಯಬೇಕಾದವರು ಭಕ್ತರಲ್ಲಿ ಮೌಢ್ಯವನ್ನು ಭಿತ್ತಿ ಸಮಯಸಾಧಕರಾಗುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸನ್ಯಾಸದ ಮತ್ತು ಸನ್ಯಾಸಿಗಳ ಪರಿಭಾಷೆ ಈ ಕಾಲಕ್ಕೆ ತಕ್ಕಂತೆ ಎಲ್ಲವೂ ಬದಲಾಗುತ್ತಿದೆ. ಹೆಚ್ಚಿನ ಕಡೆ ಅನುಕೂಲಸಿಂಧು ವಾತಾವರಣವೇ ಕಂಡುಬರುತ್ತಿದೆ.

ತ್ಯಾಗ, ನಿಸ್ವಾರ್ಥ, ತತ್ವಾಚರಣೆ, ಸಮಾಜಸೇವೆ ಬದಲಾಗಿ ಡಾಂಭಿಕತೆ, ಸ್ವಾರ್ಥ, ದುರಾಸೆ, ಪೂರ್ವಾಶ್ರಮದ ಕುಟುಂಬ ಪೋಷಣೆ ಕಪಟತೆಗಳೇ ಹೆಚ್ಚಾಗಿ ಕಾಣುತ್ತಿವೆ. ಇವರೊಂಥರ ಎಲ್ಲಾ ಬಿಟ್ಟವರು ಮತ್ತು ಎಲ್ಲವನ್ನೂ ಬಿಡದವರು. ಸಾರಾಸಗಟಾಗಿ ಎಲ್ಲರೂ ಅಲ್ಲ ಆದರೆ ಹೆಚ್ಚಿನವರು ಈ ಪರಿಧಿಯೊಳಗೆ ಖಂಡಿತವಾಗಿ ಸೇರ್ಪಡೆ ಆಗ್ತಾರೆ. ಉದಾಹರಣೆಗೆ ಆಸಾರಾಮ್, ನಿತ್ಯಾನಂದ, ರಾಮ್ ಪಾಲ್ ಇನ್ನು ಇವರ ಪಟ್ಟಿಗೆ ಯಾರ್ಯಾರು ಸೇರ್ತಾರೋ ಗೊತ್ತಿಲ್ಲ!ಇನ್ನು ನಮ್ಮ ಕರ್ನಾಟಕಕ್ಕೆ ಬಂದರೆ……

ಅದೊಂದು ಸುಸಂಸ್ಕೃತ, ವಿದ್ಯಾವಂತ, ಪ್ರಜ್ಞಾವಂತ ಸಮಾಜ. ಹಿಂದೆ ಕೃಷಿ ಮತ್ತು ಪೌರೋಹಿತ್ಯವನ್ನೇ ಅವಲಂಬಿಸಿ ಜೀವನ ಮಾಡಿದವರು. ಈಗ ದೇಶ ವಿದೇಶಗಳಲ್ಲಿ ನೆಲೆಸಿ ಎಲ್ಲಾ ರೀತಿಯ ಉದ್ಯೋಗರಂಗದಲ್ಲೂ ತಮ್ಮ ಛಾಪನ್ನು ಒತ್ತಿದ್ದಾರೆ. ಈ ಆಧುನಿಕ ಯುಗದಲ್ಲಿಯೂ ದೇವರು, ನಂಬಿಕೆ, ಸಂಪ್ರದಾಯಗಳನ್ನು ಬಿಡದೆ ಪಾಲಿಸಿಕೊಂಡು ಹೋಗುತ್ತಿದ್ದಾರೆ. ಯಾವಾಗಲೂ ತಾವಾಯಿತು ತಮ್ಮ ಪಾಡಾಯಿತು ಅನ್ನುವ ರೀತಿಯಲ್ಲಿ ಬದುಕಿದ ಜನ.

ಆದರೆ ಇಂದು ಧಾರ್ಮಿಕ ಶ್ರದ್ಧಾ ಕೇಂದ್ರದ ಮೇಲೆ ಬಂದ ಅಪವಾದ “ಶಾಂತ ಸರೋವರಕ್ಕೆ ಕಲ್ಲೆಸೆದ” ಹಾಗಿದೆ. ಮೊದಮೊದಲು ಈ ಆರೋಪವನ್ನು ಯಾರೂ ನಂಬಿರಲಿಲ್ಲ ಮತ್ತು ಇದೊಂದು ಷಡ್ಯಂತ್ರವೆಂದೇ ಸಮಾಜದವರು ಭಾವಿಸಿದ್ದರು. ನಂತರದಲ್ಲಿ “ಬೆಂಕಿ ಇಲ್ಲದೇ ಹೊಗೆಯಾಡುವುದಿಲ್ಲ” ಎಂದು ಅರಿತ ಸಮಾಜದ ಕೆಲವು ಹಿರಿಯರು ಇದರ ಸತ್ಯಾಸತ್ಯತೆಯನ್ನು ಅರಿಯಲು ಮುಂದಾದರು. ಹಾಗೆ ದೊರೆತ ಮಾಹಿತಿ, ದಾಖಲೆಗಳಿಂದ ಎಚ್ಚೆತ್ತು ಹಿಂದೆ ಆದ ಮತ್ತು ಈಗ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ವಿರೋಧಿಗಳು ಅಂತ ಹೆಸರು ತೆಗೆದುಕೊಂಡರೆ ಮತ್ತೆ ಕೆಲವರು “ವಿರೋಧಿಗಳನ್ನು” ವಿರೋಧಿಸಿ, ಖಂಡಿಸಿ ಶ್ರದ್ಧಾಕೇಂದ್ರದ ಪರ ನಿಂತರು. ಮತ್ತೆ ಕೆಲವರು ಇಂದಿಗೂ ಈ ವಿಷಯದಲ್ಲಿ ತಟಸ್ಥರಾಗಿದ್ದಾರೆ. ಹೀಗೆ ಒಂದು ಸಂಘಟಿತ ಸಮಾಜ ನಿಧಾನವಾಗಿ ಇಬ್ಭಾಗವಾಗ್ತಾ ಇದೆ. ದಿನದಿಂದ ದಿನಕ್ಕೆ ಸಮಾಜದೊಳಗೆ ಆಂತರಿಕ ಕ್ಷೋಭೆ, ಬಿರುಕು ಉಂಟಾಗುತ್ತಿದೆ. ಒಂದು ರೀತಿಯಲ್ಲಿ ಈ ಆರೋಪ ಈ ಒಂದು ಸಮುದಾಯಕ್ಕೆ “ಸೆರಗಿನಲ್ಲಿ ಕೆಂಡ ಕಟ್ಟಿಕೊಂಡ ಹಾಗೆ” ಆಗಿದೆ.

ಪರಿಸ್ಥಿತಿ ಎಲ್ಲಿಯವರೆಗೆ ಬಂದಿದೆ ಎಂದರೆ ಮನೆ ಮನೆಯಲ್ಲೂ, ಮನಮನದಲ್ಲೂ ಈ ವಿಚಾರವಾಗಿ ಒಂದು ಸಾರಿಯಾದರೂ ಮನಸ್ತಾಪವುಂಟಾಗದೇ ಬಿಟ್ಟಿಲ್ಲ. ಎಲ್ಲರೂ ಅವರವರ ಅನುಭವಕ್ಕೆ, ತರ್ಕಕ್ಕೆ, ಗ್ರಹಿಕೆ ಮತ್ತೆ ಕೆಲವು ದಾಖಲೆಗಳಿಗೆ ಪೂರಕವಾಗಿ ಪರ, ವಿರೋಧದ ನಿಲುವು ತಳೆದಿದ್ದಾರೆ. ಇಲ್ಲಿ ವಿರೋಧಿಸುವವರು ಅವ್ಯವಹಾರದ, ಅವ್ಯವಸ್ಥೆಯ, ಮತ್ತು ಅನಾಚಾರದ ವಿರೋಧಿಗಳೇ ಹೊರತು ಶ್ರದ್ಧಾಕೇಂದ್ರದ ವಿರೋಧಿಗಳಲ್ಲ ಎನ್ನುವುದು ಗಮನಿಸಬೇಕಾದ ಅಂಶ.ಈ ಪರ ವಿರೋಧದ ಮನಸ್ತಾಪ ಯಾರನ್ನೂ ಬಿಟ್ಟಿಲ್ಲ. ಅಪ್ಪ-ಮಗ, ಭಾವ-ನೆಂಟ, ಮಾವ-ಅಳಿಯ, ಅಣ್ಣ-ತಮ್ಮ, ಅಕ್ಕ-ತಂಗಿ, ನೆರೆ-ಹೊರೆ, ಕೊನೆಗೆ ಗಂಡ-ಹೆಂಡತಿಯನ್ನೂ ಬಿಟ್ಟಿಲ್ಲ.

ಮನಸ್ತಾಪದ ಕೆಲವು ಉದಾಹರಣೆಗಳು…

1. ಮನೆಮನೆಯಲ್ಲೂ ನಡೆಯುವ ಶುಭ ಕಾರ್ಯಕ್ಕೆ, ಸಣ್ಣಪುಟ್ಟ ಸಮಾರಂಭಕ್ಕೆ ವ್ಯತಿರಿಕ್ತ ಭಾವನೆ ಹೊಂದಿರುವವರನ್ನು ಕರೆಯಬಾರದು ಅನ್ನುವ ಒತ್ತಡ ಹೇರುವುದು. ಅವರನ್ನು ಕರೆದರೆ ನಾವು ಬರುವುದಿಲ್ಲ ಎನ್ನುವ ಬ್ಲಾಕ್ ಮೇಲ್ ತಂತ್ರ ಮಾಡುವುದು.
2. ಭಿನ್ನ ನಿಲುವು ಹೊಂದಿರುವವರ ಮನೆಯ ಕಾರ್ಯಕ್ರಮಗಳಿಗೆ, ಪೌರೋಹಿತ್ಯಕ್ಕೆ ಹೋಗಬಾರದು ಅಂತ ಕುಟುಂಬದ ಪುರೋಹಿತರಿಗೆ ಒತ್ತಡ ಹೇರುವುದು.
3. ಪರಿತ್ಯಕ್ತರನ್ನಾಗಿ ಮಾಡ್ತೀವಿ ಅಂತ ಬೆದರಿಕೆ ಹಾಕುವುದು.
4. ಗಂಡ ಸ್ವಲ್ಪ ಭಿನ್ನ ನಿಲುವು ವ್ಯಕ್ತಪಡಿಸಿದರೆ ಹೆಂಡತಿಯ ಮೂಲಕ ಗಂಡನ ಮೇಲೆ “ಕ್ಷಮೆಯಾಚಿಸಬೇಕೆಂಬ” ಒತ್ತಡ ತರುವುದು.5. ಕಡ್ಡಾಯವಾಗಿ ಶ್ರದ್ಧಾಕೇಂದ್ರಕ್ಕೆ ಬರಲೇಬೇಕೆಂದು ಒತ್ತಾಯಿಸುವುದು.
6. ಆದಾಯದಲ್ಲಿ ಇಂತಿಷ್ಟು ದುಡ್ಡುನ್ನು ಶ್ರದ್ಧಾಕೇಂದ್ರಕ್ಕೆ ಕೊಡಬೇಕೆಂದು ಅಪ್ಪಣೆ ಹೊರಡಿಸುವುದು.
7. ಶಾಪದ ಭೀತಿವುಂಟು ಮಾಡುವುದು.
8. ಭಿನ್ನ ನಿಲುವು ಹೊಂದಿರುವವರ ಮೇಲೆ ವಯಕ್ತಿಕವಾಗಿ ಅತಿ ಕೀಳು ಮಟ್ಟದ ವ್ಯಕ್ತಿಗತ ಟೀಕೆ ಮಾಡುವುದು.

ಒಟ್ಟಾರೆಯಾಗಿ ಪರಿಸ್ಥಿತಿ “ಬಿಸಿ ತುಪ್ಪವಾಗಿದೆ”. ಉಗುಳುವ ಹಾಗೂ ಇಲ್ಲ ನುಂಗುವ ಹಾಗೂ ಇಲ್ಲ.

ಕುಟುಂಬದ ಒಳಗೆ ಮುಖ ಓರೆ ಮಾಡಿಕೊಳ್ಳುವ ಮಟ್ಟಕ್ಕೆ ಬಂದಿದೆ. ಈ ಹೋರಾಟ, ಹಾರಾಟ, ಮುಸುಕಿನ ಗುದ್ದಾಟ ಯಾರಿಗಾಗಿ? ಹೆತ್ತವರಿಗಾಗಿ ಅಲ್ಲ, ಒಡ ಹುಟ್ಟಿದವರಿಗಲ್ಲ, ಬೆನ್ನಿಗೆ ಬಿದ್ದವರಿಗಾಗಿ ಅಲ್ಲ, ಸಮಾಜದ ಅಂಕುಡೊಂಕನ್ನು ತಿದ್ದಬೇಕಾದ ಒಂದು ಧಾರ್ಮಿಕ ಶ್ರದ್ಧಾಕೇಂದ್ರ ಇವತ್ತು ಹೊರಬಾರದ ಅಪವಾದ ಹೊತ್ತು ಕಟೆಕಟೆಯಲ್ಲಿದೆ ಎನ್ನುವ ಒಂದೇ ಕಾರಣಕ್ಕಾಗಿ. ಒಂದಂತೂ ಸತ್ಯ “ಇಬ್ಬರ ಜಗಳ ಮೂರನೆಯವನಿಗೆ ಲಾಭ” ಎನ್ನುವ ರೀತಿ, ಈ ಪರ-ವಿರೋಧಿಗಳ ಒಳ ಜಗಳದ ಲಾಭವನ್ನು ಖಂಡಿತವಾಗಿಯೂ ಒಂದು ಭ್ರಷ್ಟ ವ್ಯವಸ್ಥೆ ಪಡೆಯುತ್ತಿದೆ.

source: https://www.facebook.com/groups/1499395003680065/permalink/1751861955100034/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s