ಈಗ ನಾನು ಹೇಳೋದು ಅದಲ್ಲ…

ಈಗ ನಾನು ಹೇಳೋದು ಅದಲ್ಲ…

Avadhi | November 2, 2015
ಹೇಮಲತಾ

ಸ್ವಾಮೀಜಿಯ ಮೇಲೆ ಬಂದಿರುವ ಅತ್ಯಾಚಾರ ಆರೋಪದ ವಿಚಾರಣೆ ವೇಳೆ, ಅವರಿಬ್ಬರ ನಡುವೆ ದೈಹಿಕ ಸಂಬಂಧ ಏರ್ಪಟ್ಟಿತ್ತು ಎಂದು ಸಾಬೀತುಪಡಿಸುವ ಪೂರಕ ಸಾಕ್ಷ್ಯಗಳು ಸಿಕ್ಕಿಹೋದ ಮೇಲೂ ಮಠದ ಭಕ್ತವರ್ಗದ ಹೇಳಿಕೆಗಳನ್ನು ,ಫೇಸ್ಬುಕ್ ಪೋಸ್ಟ್ಗಳನ್ನು ಗಮನಿಸುತ್ತಿದ್ದೆ. ಮಾಡಲಾಗಿರುವ ಆರೋಪವೆಲ್ಲಾ ಸುಳ್ಳು ,ವರದಿಯಲ್ಲಿ ಆ ಮಹಿಳೆ ತಿಳಿಸಿರುವ ಘಟನೆಗಳು ನಡೆವಾಗ ನಾವು ಆ ಮಹಿಳೆ ಜೊತೆಗೆ ಇದ್ವಿ,ಅಲ್ಲೇನು ನಡೆಯಲು ಸಾಧ್ಯವೇ ಇಲ್ಲಾ, ಅವರಿಬ್ಬರ ನಡುವೆ ನಡೆದಿದೆ ಎನ್ನಲಾಗುವುದೆಲ್ಲ ಸುಳ್ಳು -ಹೀಗೆ.

ಉನ್ನತ ಅಧಿಕಾರಿಯೊಬ್ಬರು ಸತ್ತದ್ದು ಕೊಲೆಯಿಂದಲ್ಲ ಅದೊಂದು ಅತ್ಮಹತ್ಯೆ ಅಂತಾದಾಗಲೂ ಹಾಗೆ,ಬೆಳಕಿಗೆ ಬಾರದ ಬೇರೇನೊ ಷಡ್ಯಂತ್ರ ಇದೆ ಮತ್ತೂಂದಷ್ಟು ಜನ ಮಾತಾಡುತ್ತಲೆ ಹೋದರು .ವರದಿ ಬೀಳುವ ಮೊದಲು ನನಗೂ ಸಹ ನಂಬಲು ಸಾಧ್ಯವಾಗದೆ ಸ್ನೇಹಿತರೊಂದಿಗೆ ಅದು ಆತ್ಮಹತ್ಯೆಯಾಗಿರಲು ಸಾಧ್ಯವೇ ಇಲ್ಲ ಎಂದೇ ವಾದಿಸುತ್ತಿದ್ದೆ .

ವ್ಯಕ್ತಿಗಳ ಬಗ್ಗೆ ನಾವು ಬೆಳೆಸಿಕೊಂಡ ಇಮೇಜ್ಗಳ ಚೌಕಟ್ಟಿನಾಚೆ, ನಡೆದದ್ದನ್ನು ಅರಗಿಸಿಕೊಳ್ಳಲಾಗದ ಸಂಕಷ್ಟಗಳು ಇವು.

ಸ್ವಾಮಿಜಿ ಪ್ರಕರಣದಲ್ಲಿ ನಡೆದದ್ದು ಅತ್ಯಾಚಾರವಾಗಿರಬಹುದು ಅಥವ ಒಪ್ಪಿತ ಸೆಕ್ಸ ಇದ್ದಿರಬಹುದು, ಸತ್ಯಾಸತ್ಯತೆ ಇನ್ನು ಗೊತ್ತಿಲ್ಲ. ಇಬ್ಬರು ಪ್ರೌಢ ವಯಸ್ಕರ ನಡುವೆ ಪರಸ್ಪರ ಸಮ್ಮತಿಯಿಂದ ನಡೆವ ಸೆಕ್ಸ ಕ್ರಿಮಿನಲ್ ಅಪರಾಧವಲ್ಲ ಅಂತಾರೆ ಪ್ರತಿಭಾನಂದಕುಮಾರ್ ರವರು.
ಹಾಗೆಯೆ ಹಲವರು ೧೫೦ ಕ್ಕೂ ಹೆಚ್ಚು ಬಾರಿ ಒಬ್ಬ ವಿದ್ಯಾವಂತ ಮತ್ತು ಬುದ್ದಿಸ್ಪಷ್ಟವಿರುವ 50ರ ವಯಸಿನ ಮಹಿಳೆಯ ಮೇಲೆ ನಿರಂತರ ಅತ್ಯಾಚಾರ ನಡೆಯಬಹುದಾದರು ಹೇಗೆ ಅಂತ ತರ್ಕಬದ್ದ ಪ್ರಶ್ನೆ ಕೇಳ್ತಾರೆ .ದುಡ್ಡಿನ ಪ್ರಲೋಭನೆಗೆ ಮಾಡಲಾಗ್ತಿರುವ ಹುರುಳಿಲ್ಲದ ಆರೋಪ ಎನ್ನುವುದು ಕೆಲವರ ಅಭಿಪ್ರಾಯ.

ಏನೇ ಆಗಿದ್ದರು ಅಂತೂ ದೈಹಿಕ ಮೈತ್ರಿಯಂತು ಧೃಡಪಟ್ಟಿದೆ. ಅದು ಒಪ್ಪಿತ ಸೆಕ್ಸ ಆಗಿದ್ದಲ್ಲಿ ಆಕೆ ಇನ್ನೂಬ್ಬರ ಹೆಂಡತಿಯಾಗಿದ್ದರು ಎನ್ನುವುದು ಸಂಪ್ರದಾಯಸ್ಥರ ತಕರಾರು ಮತ್ತು ಸಾಮಾಜಿಕ-ಸಾಂಸಾರಿಕ ಕಟ್ಟುಪಾಡುಗಳ ಪ್ರಕಾರ ಅಪರಾಧ. ವೈವಾಹಿಕ ಬದುಕಿನಾಚೆಗಿನ ದೈಹಿಕ ಸಂಬಂಧಕ್ಕೆ ಕಾನೂನೂ ಮತ್ತು ಧರ್ಮದಲ್ಲೂ ವಿರೋಧವಿದ್ದು, ಡೈವೋರ್ಸ ಪಡೆಯ ಬಹುದಾದ ಕಾರಣವಾಗುತ್ತದೆ. ಅತ್ತ ಸರ್ವಸಂಗ ಪರಿತ್ಯಾಗಿಯಾಗಿ ಕಾಮನೆಗಳಿಂದ ದೂರವಿರಬೇಕಿದ್ದ ಸ್ವಾಮೀಜಿ ತಮ್ಮ ಸ್ಥಾನಕ್ಕೆ ದ್ರೋಹವೆಸಗಿದ್ದಾರೆ ನೈತಿಕ ದ್ರೋಹ ಮಾಡಿ ಧಾರ್ಮಿಕ ಭಾವನೆಗಳಿಗೆ ದಕ್ಕೆಯುಂಟು ಮಾಡ್ಡಿದ್ದಾರೆ , ಒಂದು ವೇಳೆ ಅತ್ಯಾಚಾರವೇ ಆಗಿದ್ದಲ್ಲಿ ಅದು ಶಿಕ್ಷಾರ್ಹ ಅಪರಾಧ …

ನಾ ಹೇಳಹೊರಟಿದ್ದು ಅದ್ಯಾವುದೂ ಅಲ್ಲ.

ವೈಜ್ಞಾನಿಕ ಪರೀಕ್ಷೆಯಿಂದ ದೈಹಿಕ ಮೈತ್ರಿ ಸಾಬೀತಾದರೂ ಅದನ್ನು ಒಪ್ಪಿಕೊಳ್ಳಲಾಗದೆ ಹಲಬುತ್ತಿರುವ ಒಂದಷ್ಟು ಜನರ ಬಗ್ಗೆ.ಎಲ್ಲರಿಗೂ ಮನದಟ್ಟಾಗುವಂತೆ ಪ್ರಕರಣ ಶುರುವಾದಾಗಿನಿಂದ ಸರ್ಕಾರ ಮತ್ತು ಕಾನೂನು ಸ್ವಾಮಿ ಪರವಾಗಿ ನಿಂತು ಸಹಕರಿಸುತ್ತಿದ್ದಿದ್ದು ಹೆಚ್ಚಿಗೆ ಸುಳ್ಳೇನು ಅಲ್ಲ.ಅದಾಗ್ಯೂ ಪರೀಕ್ಷೆಯ ತೀರ್ಪು ಮಾತ್ರ ಸ್ವಾಮಿಯ ವಿರುದ್ದ ಬಂದಿದೆ.

ಒಂದು ವೇಳೆ ಮಂಕು ಬೂದಿ ಎರಚದೆ,ಅತ್ಯಾಚಾರವೆಸಗದೆ,ಇಬ್ಬರು ಸಹಕರಿಸಿದ್ದಾರೆ ಎಂದರೆ ಅದನ್ನು ಭಕ್ತವರ್ಗ ತಣ್ಣಗೆ ಒಪ್ಪಿಕೊಳ್ಳುತ್ತದ?
ಅಂದರೆ ಮಠಾಧೀಶರು ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡಿದ್ದರು ಎಂಬುದ್ದನ್ನು ಅರಗಿಸಿಕೊಳ್ಳುತ್ತಾರ ?
ಕಡೇಪಕ್ಷ ಸರಿ ತಪ್ಪು,ಪಾಪ ಪುಣ್ಯ,ಸಾಮಾಜಿಕ ಧಾರ್ಮಿಕ ಕಾನೂನು ಎಲ್ಲ ಕಟ್ಟುಪಾಡುಗಳ ಆಚೆಗೆ ಅವರೂ ಸಹ ಕಾಮನೆನಿಗ್ರಹಿಸಲಾಗದ ಒಬ್ಬ ಹುಲು ಮಾನವ ಎಂದೂ?
ಉಹೂಂ ಸಾಧ್ಯವಿಲ್ಲ…
ಅವರು ಹಾಗೆ ಮಾಡಿರಲು ಸಾಧ್ಯವಿಲ್ಲ ಅಂತ ಹೇಳುವವರು ಕಡೆವರೆಗೂ ಇದ್ದೇ ಇರುತ್ತಾರೆ.

ಹಾಗೆ ಆ ಅಧಿಕಾರಿಯ ವಿಷಯ.ಅದು ಆತ್ಮಹತ್ಯೆ ಆಗಿರಲಾರದು ಅನಿಸಿದ್ದು ಅವರನ್ನು ದೃಢಮನಸಿನ,ಆತ್ಮಸ್ಥೆರ್ಯದ ವ್ಯಕ್ತಿ ಎಂದು ಗ್ರಹಿಸಿದ್ದರಿಂದ.ಅಂತ ದೊಡ್ಡ ಸಾಧನೆ ಮಾಡಿದ ಪ್ರೌಢ ವಯಸಿನ ವ್ಯಕ್ತಿ ಕ್ಝ್ಶುಲ್ಲಕ ವಿಷಯಕ್ಕೆ ಸಾವಿನಂತ ಕೆಟ್ಟ ನಿರ್ಧಾರ ಮಾಡಲಾರರು ಎಂಬ ನಂಬಿಕೆಯಿಂದ .ಮತ್ತು ಅಂತಹ ಅತ್ಯುನ್ನತ ಹುದ್ದೆಯಲ್ಲಿದ್ದವರಿಗೆ ಕೈಗೆಟುಕದ್ದು ಯಾವುದೂ ಇರಲಾರದೆಂಬ ಒಳಗೊಳಗಿನ ದನಿ.ಪ್ರಾಮಾಣಿಕ ಅಧಿಕಾರಿಗೆ ರಾಜಕೀಯ ಒತ್ತಡ,ಬೆದರಿಕೆಗಳು ಇರಬಹುದೆಂಬ ಸಂಭವನೀಯ ಊಹೆ.

ಅಸಲಿಗೆ ನಮಗೆ ದೃಢಪಡದ ಅದ್ಯಾವುದೇ ಕಾರಣವಾಗಿದ್ದರೂ, ಪರೋಕ್ಷವಾಗಿ ಒತ್ತಡ ಸಾವಿಗೆ ಕಾರಣವಾಗಿದ್ದರು , ನಡೆದದ್ದು ಕೊಲೆಯಲ್ಲ ಆತ್ಮಹತ್ಯೆಯೆಂದೆ ಎಲ್ಲಾ ಮೂಲಗಳು ಅಭಿಪ್ರಾಯಕೊಟ್ಟವು.ಘಟನೆಯ ಕಾವು ಪ್ರಖರವಾಗಿದ್ದಾಗ ಏನೆಲ್ಲಾ ಲಾಜಿಕ್ಗಳನ್ನು ನಾವು ಮುಂದಿಡತೊಡಗಿದೆವು…

ಇಷ್ಟಾದರೂ ಇನ್ನೂ ಸಂಪೂರ್ಣ ಒಪ್ಪದ ಜನ ಇದ್ದೇಇದ್ದಾರೆ.
ಎಂತಹ ವ್ಯಕ್ತಿಯೇ ಆದರು ಅತ್ಯಂತ ಖಿನ್ನನಾದಾಗ,ಹತಾಶನಾದಾಗ ಅಸಹಾಯಕನೂ ಆಗಿ ಅಂತ ನಿರ್ಧಾರ ಮಾಡಬಹುದು. ಅಥವ ಮತ್ತೊಂದು ರೀತಿ ಬಯಸಿದ್ದು ಸಿಗಲೇಬೇಕೆಂಬ ಹಠ -ಛಲ ಇದ್ದು ,ಬಯಸಿದ್ದನೆಲ್ಲಾ ಗಳಿಸುವ ಸಾಮರ್ಥ್ಯವುಳ್ಳವರನ್ನು, ಎಂದೂ ಸೋಲದಿದ್ದ ಅಹಂ ಮಣಿಸಿರಬಹುದಲ್ಲವೇ…ಅಥವಾ ಮತ್ತಾವುದೋ ಬಗೆಹರಿಸಲಾರದ್ದಂತ ಹತೋಟಿಗೆ ತರಲಾಗದ ವೈಯುಕ್ತಿಕ ಬದುಕಿನ ಏರುಪೇರುಗಳು ಮರ್ಯಾದಸ್ಥರ ಸುಟ್ಟು ತಿನ್ನುವಂತೆ ತಿಂದಿರಬಹುದು.. ಒಮ್ಮೊಮ್ಮೆ ಕೈಮೀರಿದ ಬದುಕಿನ ತಲ್ಲಣಗಳು ಎಲ್ಲರನ್ನು ಸುತ್ತುವರೆದೆವರೆಯುತ್ತದೆ
ಮನಸಲ್ಲಿ ಬೆಳೆದುಕೊಂಡ ಇಮೇಜ್ನ ನಾವೇ ವಿರೂಪವಾಗಿಸಲು,ಅದರ ವಿರುಧ್ಧ ಹೋಗಲು ಸಿದ್ದವಿರುವುದಿಲ್ಲ. ಅದು ಆತ್ಮಾಹುತಿ ಎಂದರೆ ಇನ್ನೂ ಅಜೀರ್ಣವಾಗುತ್ತದೆ ..

ಹಿಂದೊಮ್ಮೆ ಬಹಳ ಅಚ್ಚುಮೆಚ್ಚಿನ ರಾಜಕಾರಣಿಗೆ ಸಿನಿಮಾನಟಿಯೊಂದಿಗೆ ಅನ್ಯೋನ್ಯತೆ ಇತ್ತು ಎನ್ನುವ ಮುಸುಕಿನ ಒದಂತಿಗಳು ಹರಿದಾಡುತ್ತಿದ್ದಾಗ ಅವರನ್ನು ಅಕ್ಷರಸಹ ಆರಾಧಿಸುತ್ತಿದ್ದ ಹಿರಿಯರೊಬ್ಬರು ಇದೆಲ್ಲಾ ಅವರನ್ನು ರಾಜಕೀಯವಾಗಿ ದುರ್ಬಲಪಡಿಸಲು ನಡೆಸಿರುವ ಹುನ್ನಾರ ಎಂದೇ ತಮ್ಮ ಅಂತರಾತ್ಮ ಸಮೇತ ನಂಬಿದ್ದರು ..ಮೀಡಿಯಾಗಳು ಖುಲ್ಲಂಖುಲ್ಲ ನಿಜ ಬಿತ್ತರಿಸಿದ ಮೇಲೂ ಅವರಿಗೆ ಅಷ್ಟು ಸುಲಭಕ್ಕೆ ಒಪ್ಪಿಕೊಳ್ಳಲಾಗಲಿಲ್ಲ …

ಈ ರೀತಿ ನಂಬಲಾಗದಂತ ಸಂಘರ್ಷ ಎದುರಾದಾಗಲೆಲ್ಲಾ ಬಹಳ ಬೇಗ ಅಪನಂಬಿಕೆಗೆ, ಅಗ್ಗದ ಮಾತುಗಳಿಗೆ ಸಿಲುಕುವವರು “ಜೊತೆಗಿದ್ದವರು”.
ಶೂರ್ಪನಖಿ,ಮಾಯೆಯ ಹೆಣ್ಣು,ಕಾಮಿನಿ,ಮನಸನ್ನು ಹತೋಟಿ ತಪ್ಪಿಸಿದ ಮಾಯಾಂಗನೆ, ಋಷಿಗಳೆ ವಿಚಲಿತರಾದರು ಇನ್ನು ಪಾಪ ಅವನೇನು ಮಾಡಲು ಸಾಧ್ಯ,ಅವಳು ಸರಿ ಇರಲಿಲ್ಲವಂತೆ ಅದಕ್ಕೆ ಹಂಗೆ ಮಾಡಿಕೊಂಡನಂತೆ, ಜೋತೆಗಿದ್ದವರೇ ಮೋಸಮಾಡಿದರಂತೆ …ಇತ್ಯಾದಿ ಊಹಾಪೋಹಗಳು ಓಡಾಡ ತೊಡಗುತ್ತವೆ.
ಎಲ್ಲೋ ಕೆಲವೊಮ್ಮೆ ಬಾಹ್ಯ ವಾತಾವರಣ ಪರೋಕ್ಷವಾಗಿ ಕಾರಣವಾದರು , ಬಹಳಷ್ಟು ವೇಳೆ ಅಂತಹವು ನಂಬಲಾರದ ಹೊಟ್ಟೆ ತಳಮಳಕ್ಕೆ ಸುಲಭಕ್ಕೆ ಹುಡುಕಿಕೊಂಡ ವರ್ಗಾವಣೆಯ ನೆಪಗಳಾಗಿರುತ್ತವೆ

ಬೇರೊಬ್ಬ ನಟಿಯೊಂದಿಗೆ ಹೆಸರು ತಳುಕುಹಾಕಿಕೊಂಡಿದ್ದ ನಟನೊಬ್ಬ ಹೆಂಡತಿಯನ್ನ ಹಿಗ್ಗಾಮುಗ್ಗಾ ಜಡಿದಾಗ, ಅವನನ್ನು ಅಕ್ಷರಶ ನಾಯಕ ಅಂತ ಪರಾಕಾಷ್ಟೆಯಲ್ಲಿಟ್ಟು ಪ್ರೀತಿಸುತ್ತಿದ್ದ ಗೆಳತಿಯೊಬ್ಬಳು ಅವನ ಹೆಂಡತಿ ಲಗಾಮು ಮೀರಿದ್ದಳು,ಅದಕ್ಕೆ ವ್ಯಗ್ರನಾದ,ಯಾವ ಗಂಡಸಾದರೂ ಅಷ್ಟೆ ತಾನೆ ಅಂತ ಸೊಟ್ಟಗೆ ರಾಗ ಎಳೆದಿದ್ದಳು… ಅಲ್ಲಿನವರೆಗು ಸರಿಯಿದ್ದ, ಯಾರಿಗೂ ಗೊತ್ತಿಲ್ಲದ ವಿಷಯಗಳೆಲ್ಲ ಒಮ್ಮೆಲ್ಲೆ ಬುಗಿಲೆದ್ದು ಹೊಸ ಕಥೆಗಳಾಗಿ ಅಲೆಯುತ್ತಿದ್ದವು .

ಇನ್ನು ರಂಪಾಟ ಮಾಡಿಕೊಂಡು ಬೀದಿಗೆ ಬಂದ ಗಂಡಹೆಂಡಿರ ಬಗ್ಗೆ ಮಾತಾಡುವಾಗಲೂ ಹಾಗೆ,ಎಷ್ಟು ವರ್ಷದಿಂದ ನೋಡಿಲ್ಲ ಹೇಳು,ನಮ್ಮ ಕಣ್ಣೆದುರು ಬೆಳೆದ ಹುಡುಗ/ಹುಡುಗಿ , ಹಾಗೆಲ್ಲ ಮಾಡಿರೋಕೆ ಸಾಧ್ಯಾನೆ ಇಲ್ಲ… ಕಡಾಖಂಡಿತ ಆ ಕಡೆಯಿಂದಲೆ ತಪ್ಪಾಗಿರೋದು!ಗೊತ್ತಿಲ್ಲದ ಮುಖದ ಮೇಲೆ ಷರಾ ಬರೆದು ಸಹಿ ಒತ್ತಿಬಿಡುತ್ತಾರೆ.

ಹಿಂದೊಮ್ಮೆ ಟೀವಿ ಯಲ್ಲಿ ಅಂತದ್ದೆ ಪಾನೆಲ್ ಡಿಸ್ಕಷನ್ ಒಂದು ಬರುತ್ತಿತ್ತು..ಗಂಡನ ಕಿರುಕುಳವನ್ನು, ವಿಚಿತ್ರ ವರ್ತನೆಯನ್ನು ಆ ಹುಡುಗಿ ಪ್ರತಿ ಘಟನೆಯೊಂದಿಗೆ1 ವಿವರಿಸಿ ಹೇಳಿದಳು.ಒಪ್ಪಿಕೊಂಡ ಕಾಂಪನ್ಸೇಷನ್ ಹೊಂದಿಸಲಾಗದ ಗಂಡ ಟಿವಿ ಚಾನಲ್ಗೆ ಬಂದಿದ್ದ, ಹೆಂಡತಿ ಬೇಕೆನ್ನುವುದು ಅವನ ತಕ್ಷಣದ ಪರಿಹಾರ .ಅವನ ಪರ ಮಾತಾಡಲು ಮನೆಪಕ್ಕದವನೆಂದುಕೊಂಡು ವ್ಯಕ್ತಿಯೊಬ್ಬ ಕರೆ ಮಾಡಿದ. ಅವನು ಹೇಳಿದ್ದು ಒಂದೇ ಮಾತು, ಬಹಳ ವರ್ಷಗಳಿಂದ ಹುಡುಗನನ್ನ ನೋಡಿದ್ದೇವೆ ಆದ್ದರಿಂದ ಅವಳೇ ಸರಿಯಿಲ್ಲ…
ಅವರೆಲ್ಲಾ ಸೇರಿಕೊಂಡು ದೊಡ್ಡದು ಮಾಡಿದ ವಿಷಯ ಅಂದ್ರೆ ದೂರವಾದ ಅವಳು ಈಗೀಗ ದಿನಕ್ಕೆ ಒಂದಷ್ಟು ಮೆಸೇಜ್ನ ಸ್ನೇಹಿತನಿಗೆ ಕಳಿಸುತ್ತಿದ್ದಾಳೆ … ಆದ್ದರಿಂದ ಅವಳು ಮೊದಲಿನಿಂದಲೂ ಸರಿಯಿಲ್ಲ .

ಹೇಳುತ್ತಾ ಹೋದರೆ ಬೇಕಾದಷ್ಟು ನಿದರ್ಶನಗಳು ಸಿಗುತ್ತಾ ಹೋಗುತ್ತವೆ.
ಕಾಡೊ ಪ್ರಶ್ನೆ ಒಂದೇ ಇಮೇಜ್ಗಳನ್ನ ಬದಿಗಿಟ್ಟು ವಸ್ತುನಿಷ್ಟವಾಗಿ ಒಪ್ಪಿಕೊಳ್ಳುವ ಟಾಲರೆಂನ್ಸ ಯಾಕೆ ಜನ ಬೆಳೆಸಿಕೊಳ್ಳುವುದಿಲ್ಲ.ದೂರದಿಂದ ನೋಡಿದ ನೋಟದ ಹೊರತಾಗಿಯು ಹತ್ತಿರದ ವಿಷಯ ಬೇರೆಯೆ ಇರಬಹುದು.
ನಮಗೆ ನಾವುಗಳೇ ಹಲವಾರು ತಿರುವುಗಳಲ್ಲಿ ಎಷ್ಟು ಅಪರಿಚಿತ ಅನಿಸುವಾಗ , ಬಹಳ ಕಾಲಗಳಿಂದ ತಿಳಿದ ವ್ಯಕ್ತಿಯ ಬಗ್ಗೆ ತಿಳಿಯದ್ದು ಬಹಳವಿರಬಹುದು..ಮನುಷ್ಯನೊಬ್ಬನ ಸಾಮಾಜಿಕ,ಶೈಕ್ಷಣಿಕ ,ವೃತ್ತಿಬದುಕಿಗೂ ವೈಯುಕ್ತಿಕ ಬದುಕಿಗೂ ಅಜಗಜಾಂತರ ಅಂತರವಿರುತ್ತದೆ.ಬಯಲಿನಲ್ಲಿ most well behaved ವ್ಯಕ್ತಿ ನಾಲ್ಕು ಗೋಡೆಗಳ ಮಧ್ಯೆ ಬೇರೆಯೇ ಇರಬಹುದು
ಕಾಮ ಕ್ರೋಧ ಲೋಭ ಮೋಹ ಮದ ಮತ್ಸರಗಳು ಎಲ್ಲರೂ ಜಯಿಸಲಾಗದ ಮಾನವ ಸಹಜ ಗುಣಗಳು. ಎಲ್ಲೆ ಮೀರಿ ಪ್ರಕಟವಾಗಿ ಗಡಿ ದಾಟಿ ಅಪರಾಧ- ಕ್ರೌರ್ಯದ ಎಳೆ ತಾಗುವವರೆಗೂ ಹೋಗಿರಲುಬಹುದು .
ಸಂಭವನೀಯತೆ ಕಡಿಮೆ ಇದ್ದರು ಸಾಧ್ಯತೆಯಂತು ಇದ್ದೇಇರುತ್ತದೆ.ಎಲ್ಲರನ್ನು ಅಪನಂಬಿಕೆಯಲ್ಲಿ ನೋಡಬೇಕೆಂದಲ್ಲ, ಸಮಯದಲ್ಲಿ ಅರಗಿಸಿಕೊಳ್ಳುವ ಸಹಿಷ್ಣುತೆ ಕೂಡ ಬೆಳೆಸಿಕೊಳ್ಳಬೇಕು

ಪಕ್ಕದವರ ಮೇಲೆ ತಪ್ಪು ವರ್ಗಾಯಿಸುವ ಮುನ್ನ,ಗಲ್ಲಿಗಳಲ್ಲಿ ಕೂತು ಬಿಡುವಿನ ಸರಕು ಮಾಡಿಕೊಳ್ಳುವ ವೇಳೆ,ಟಿವಿ ಪೇಪರ್ ನ್ಯೂಸ್ಗಳ ಟಿ ಆರ್ ಪಿ ಗೆ ಕವಳ ಒದಗುವಾಗ ನಮ್ಮ ಒಪ್ಪಿಗೆಗೆ ಕಾಯದೆ ಗಾಸಿಪ್ ಮತ್ತು ಸತ್ಯ ಬೇರೆಯೆ ಇರಬಹುದು.
ನನ್ನ ಮಗನಾದ ಕಾರಣಕ್ಕೆ ಅವನು ಹೀಗೆಲ್ಲ ಮಾಡಲು ಸಾಧ್ಯವೇ ಇಲ್ಲ ಎನ್ನುವ ತಾಯಿಗಿಂತ, ನಡೆದಿದ್ದರೂ ನಡೆದಿರಬಹುದು ಎಂಬ ಎಚ್ಚರಿಕೆಯಲ್ಲಿ ಸರಿಪಡಿಸಲು ,ಶಿಕ್ಷಿಸಿ ತಿದ್ದಲು ಮುಂದಾಗುವ ತಾಯಿ ವಿಶಾಲ ಹೃದಯದವಳಾಗುತ್ತಾಳೆ.

http://avadhimag.com/2015/11/02/%E0%B2%88%E0%B2%97-%E0%B2%A8%E0%B2%BE%E0%B2%A8%E0%B3%81-%E0%B2%B9%E0%B3%87%E0%B2%B3%E0%B3%8B%E0%B2%A6%E0%B3%81-%E0%B2%85%E0%B2%A6%E0%B2%B2%E0%B3%8D%E0%B2%B2/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s