ಆರೋಪಕ್ಕೊಳಗಾದ ಕಾವಿಧಾರಿಗಳ ರಕ್ಷಣೆಗೆ ಸ್ತ್ರೀಪಡೆ

ಆರೋಪಕ್ಕೊಳಗಾದ ಕಾವಿಧಾರಿಗಳ ರಕ್ಷಣೆಗೆ ಸ್ತ್ರೀಪಡೆ

Sep 9 2015 4:19AM

ಸುರೇಶ ಭಟ್ ಬಾಕ್ರಬೈಲ್

ಧರ್ಮ ಹಾಗೂ ಧರ್ಮಗುರುಗಳ ನಾಶಕ್ಕೆ ಮುಂದಾಗಿರುವ ಶಕ್ತಿಗಳನ್ನು ಮಟ್ಟಹಾಕುವ ಉದ್ದೇಶ ತನ್ನದೆಂದು ಹೇಳಿಕೊಳ್ಳುವ ಸಂಘಟನೆಯೊಂದು ಇತ್ತೀಚೆಗೆ ಅಸ್ತಿತ್ವಕ್ಕೆ ಬಂದಿರುವುದಾಗಿ ವರದಿಯಾಗಿದೆ. ನಾರಿ ಸುರಕ್ಷಾ ವೇದಿಕೆ ಎಂಬ ಹೆಸರಿನ ಈ ಸಂಘಟನೆ ಇದೇ ಸಪ್ಟಂಬರ್ 4ರಂದು ಬೆಂಗಳೂರಿನಲ್ಲಿ ಸ್ವಸ್ಥ ಸಮಾಜಕ್ಕಾಗಿ ಮಹಿಳಾ ಜಾಗೃತಿ ಸಮಾವೇಶವನ್ನು ಹಮ್ಮಿಕೊಂಡಿತ್ತು. ಅಂದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಕೆಲವು ಮಹಿಳೆಯರು ಅತ್ಯಾಚಾರಕ್ಕೊಳಗಾದ ಸೋದರಿಯರ ಹಕ್ಕುಗಳನ್ನು ಎತ್ತಿಹಿಡಿಯುವ ಬದಲು ಅವರನ್ನು ನಿಂದಿಸಿರುವ ವಿಲಕ್ಷಣ ಘಟನೆ ನಡೆದಿದೆ! ಸದರಿ ಸಮಾವೇಶದಲ್ಲಿ ಭಾಗವಹಿಸಿದ್ದ ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಪ್ರಮೀಳಾ ನೇಸರ್ಗಿ ಮತ್ತು ಆಯೋಗದ ಹಾಲಿ ಸದಸ್ಯೆ ಸುಮನ್ ಹೆಗಡೆ ಇಬ್ಬರೂ ನಿರ್ದಿಷ್ಟವಾಗಿ ರಾಘವೇಶ್ವರ ಸ್ವಾಮಿ ಆರೋಪಿಯಾಗಿರುವ ಎರಡು ಅತ್ಯಾಚಾರ ಪ್ರಕರಣಗಳಲ್ಲಿನ ಸಂತ್ರಸ್ತ ಮಹಿಳೆಯರ ಬಗ್ಗೆ ತೀರ ಕೇವಲವಾಗಿ ಮಾತನಾಡಿದ್ದಾರೆ. ಸುಮನ್ ಹೆಗಡೆಯವರ ಪ್ರಕಾರ ಪ್ರಚಾರಕ್ಕೋಸ್ಕರ, ಪ್ರತಿಷ್ಠಿತರ ಚಾರಿತ್ರ್ಯವಧೆಗೋಸ್ಕರ ಸುಳ್ಳು ಕೇಸ್ ದಾಖಲಿಸಲಾಗುತ್ತಿದೆಯಂತೆ. ಮುಂದುವರಿದು ಆಕೆ ಪುರುಷ ಮತ್ತು ಮಹಿಳೆಯ ಸಮ್ಮತಿಯಿಂದ ಮಾತ್ರ ಲೈಂಗಿಕ ಸಂಪರ್ಕ ನಡೆಯಲು ಸಾಧ್ಯ. ಇದನ್ನು ಬಲಾತ್ಕಾರ ಎನ್ನಲಾಗುವುದಿಲ್ಲ. ನಿರಂತರವಾಗಿ ಅತ್ಯಾಚಾರ ಎಸಗಲು ಸಾಧ್ಯವೆ ಇಲ್ಲ ಎಂದು ತೀರ್ಮಾನಿಸಿದ್ದಾರೆ!

ನೇಸರ್ಗಿಯವರಂತೂ ವಿವೇಚನೆ ಇಲ್ಲದವರಂತೆ ನಾಲಿಗೆ ಹರಿಯಬಿಟ್ಟಿದ್ದಾರೆ. ಧರ್ಮ ಹಾಗೂ ಧರ್ಮಗುರುಗಳನ್ನು ನಾಶ ಮಾಡಲು ಶೂರ್ಪನಖಿಯರು ಜನ್ಮತಾಳಿದ್ದು ಇವರಿಂದ ಸ್ವಾಮೀಜಿಯನ್ನು ರಕ್ಷಿಸಲು ಮಹಿಳೆಯರು ಸೇನೆಯೊಂದನ್ನು ಕಟ್ಟಬೇಕಿದೆ……. ಎಂದ ಆಕೆ, ಕಾವಿ ಮೇಲೆ ಸುಳ್ಳು ಮೊಕದ್ದಮೆ ದಾಖಲಿಸುವ ಸಂಘಟನೆಗಳನ್ನು ಬೇರು ಸಮೇತ ಕಿತ್ತೊಗೆಯಲು ಕರೆಕೊಟ್ಟಿದ್ದಾರೆ.

ಮಹಿಳಾ ಆಯೋಗದಲ್ಲಿ ಹಿಂದೆ ಇದ್ದವರು ಮತ್ತು ಈಗ ಇರುವವರೇ ಈ ತೆರನಾಗಿ ಪೂರ್ವಗ್ರಹಪೀಡಿತರಾದರೆ ಆಯೋಗದ ತನಿಖೆಗಳು ನಿಷ್ಪಕ್ಷಪಾತವಾಗಿರುತ್ತವೆ, ದೂರುದಾರರಿಗೆ ನ್ಯಾಯ ಸಿಗುತ್ತದೆ ಎಂಬ ಭರವಸೆ ಇಟ್ಟುಕೊಳ್ಳುವುದಾದರೂ ಹೇಗೆ? ಮಾಜಿ ಅಧ್ಯಕ್ಷೆಯ ರಾಜಕೀಯ ಒಲವುಗಳು ರಾಘವೇಶ್ವರ ಸ್ವಾಮಿಯನ್ನು ಪರೋಕ್ಷವಾಗಿ ಬೆಂಬಲಿಸುತ್ತಿರುವ ರಾಜಕೀಯ ಪಕ್ಷದ ಕಡೆಗೇ ಇರುವುದು ಎಲ್ಲರಿಗೂ ತಿಳಿದಿರುವ ಸಂಗತಿಯೇ ಆಗಿದೆ. ಮಾನ್ಯರು ಸದ್ಯ ಆಯೋಗದ ಪದಾಧಿಕಾರಿಯಲ್ಲ ಎಂದುಕೊಂಡರೂ ಆಯೋಗದ ಹಾಲಿ ಸದಸ್ಯೆಯಾದ ಸುಮನ್‌ರವರು ಹೀಗೆ ಪೂರ್ವಗ್ರಹಪೀಡಿತರಂತೆ ಮಾತಾಡಲು ಕಾರಣವೇನು? ಬಹುಶಃ ಇದನ್ನು ಎರಡು ವಿಧಗಳಲ್ಲಿ ಅರ್ಥೈಸಿಕೊಳ್ಳಬಹುದು. ಒಂದು, ಇದು ಅವರ ವೈಯಕ್ತಿಕ ಅಭಿಪ್ರಾಯ ಆಗಿರಬಹುದು. ಆದರೆ ಆಯೋಗದ ಸದಸ್ಯೆಯಾಗಿರುವ ಆಕೆಗೆ ವಿಚಾರಣೆಗೆ ಬಾಕಿ ಇರುವ ಪ್ರಕರಣದ ಕುರಿತು ತನ್ನ ವೈಯಕ್ತಿಕ, ಪಕ್ಷಪಾತೀಯ ನಿಲುವನ್ನು ಸಾರ್ವಜನಿಕ ವೇದಿಕೆಯಲ್ಲಿ ಪ್ರಕಟಿಸುವ ಅಧಿಕಾರ ಇಲ್ಲ. ಆದುದರಿಂದಲೆ ಆಕೆಯ ಈ ರೀತಿಯ ಹೇಳಿಕೆಗಳನ್ನು ಓದಿದ ಅನೇಕರು ಆಕೆ ಪರೋಕ್ಷವಾಗಿ ಆಯೋಗದ ಅರ್ಥಾತ್ ಸರಕಾರದ ನಿಲುವುಗಳನ್ನು ಪ್ರತಿಬಿಂಬಿಸುತ್ತಿದ್ದಾರೆಯೇ ಎಂಬ ಸಂದೇಹವನ್ನು ವ್ಯಕ್ತಪಡಿಸುತ್ತಿದ್ದಾರೆ. ಇಂತಹದೊಂದು ಸಂದೇಹ ಸಂಪೂರ್ಣ ನಿರಾಧಾರವೆಂದು ಹೇಳಲಾಗುವುದಿಲ್ಲ.

ಏಕೆಂದರೆ ಮೊದಲನೆ ಸಂತ್ರಸ್ತೆ ಪ್ರೇಮಲತಾರ ದೂರು ಸ್ವೀಕರಿಸಲು ವಿಳಂಬಿಸಿರುವುದರಿಂದ ಆರಂಭಿಸಿ, ದಂಪತಿ ವಿರುದ್ಧವೇ ಪ್ರಕರಣ ದಾಖಲಾಗಿರುವುದು; ಪೊಲೀಸರು ಚಾತುರ್ಮಾಸ್ಯದ ನೆಪವನ್ನು ಮಾನ್ಯಮಾಡಿ ಸ್ವಾಮಿಯನ್ನು ಬಂಧಿಸದಿರುವುದು; ಹೈಕೋರ್ಟ್‌ನ ನಾಲ್ವರು ನ್ಯಾಯಮೂರ್ತಿಗಳು ಕಾರಣ ನೀಡದೆ ವಿಚಾರಣೆಯಿಂದ ಹಿಂದೆ ಸರಿದಿರುವುದು; ವೈದ್ಯಕೀಯ ಪರೀಕ್ಷೆಯಲ್ಲಿ ಸಂತ್ರಸ್ತೆಯ ಬಟ್ಟೆಯ ಮೇಲೆ ಇದ್ದುದು ಸ್ವಾಮಿಯ ವೀರ್ಯವೇ ಎಂದು ಸಾಬೀತಾಗಿದ್ದರೂ, ಇದೀಗ ಮತ್ತೋರ್ವ ಸಂತ್ರಸ್ತೆಯೂ ಅತ್ಯಾಚಾರದ ದೂರು ದಾಖಲಿಸಿದರೂ ಆರೋಪಿಯನ್ನು ಇದುವರೆಗೆ ಬಂಧಿಸದಿರುವುದು; ಸಿಐಡಿ ತನಿಖೆಯಲ್ಲಿ ಆಗುತ್ತಿರುವ ವಿಳಂಬ; ಇನ್ನೂ ಆರೋಪಪಟ್ಟಿ ಸಲ್ಲಿಸದಿರುವುದು ಇವೇ ಮೊದಲಾದ ವಿದ್ಯಮಾನಗಳು ಇದನ್ನೆಲ್ಲ ಗಮನಿಸುತ್ತಿರುವ ಜನರ ಮನಸ್ಸಿನಲ್ಲಿ ಸರಕಾರವೇ ಸ್ವಾಮಿಯ ಬೆಂಬಲಕ್ಕೆ ನಿಂತಿದೆಯೇನೋ ಎಂಬ ಅನುಮಾನಗಳನ್ನು ಹುಟ್ಟುಹಾಕುತ್ತಿವೆ. ಆದುದರಿಂದ ಇಂತಹ ಅನುಮಾನಗಳಿಗೆ ಆಸ್ಪದವಿರದಂತೆ ತನ್ನ ನಿಷ್ಪಕ್ಷಪಾತತೆಯನ್ನು ಮತ್ತು ನ್ಯಾಯಪರತೆಯನ್ನು ರಾಜ್ಯದ ಜನತೆಗೆ ತೋರ್ಪಡಿಸುವ ಗುರುತರ ಹೊಣೆಗಾರಿಕೆ ಸರಕಾರದ ಮೇಲಿದೆ. ಇಲ್ಲವಾದರೆ ಮತದಾರ ಜನತೆಯ ಅನುಮಾನಗಳು ಹೆಚ್ಚುತ್ತಾ ಹೆಚ್ಚುತ್ತಾ ಗಾಢನಂಬಿಕೆಗಳಾಗಿ ಪರಿವರ್ತನೆಗೊಳ್ಳಬಹುದು. ಇದರ ಅಂತಿಮ ಪರಿಣಾಮ ಏನೆಂದು ಸರಕಾರ ಯೋಚಿಸಬೇಕು.

source: http://karavalikarnataka.com/news/fullstory.aspx?story_id=4208&languageid=1&catid=11&menuid=0

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s