ಸಂಸಾರ ಲೋಕದ ಬೀಜಗಳು ನಾಶವಾದಾಗ ಮಾತ್ರ ವೈರಾಗ್ಯ ಮೂಡಲು ಸಾಧ್ಯ

ಸಂಸಾರ ಲೋಕದ ಬೀಜಗಳು ನಾಶವಾದಾಗ ಮಾತ್ರ ವೈರಾಗ್ಯ ಮೂಡಲು ಸಾಧ್ಯ

ವಿರೋಧಿಗಳೆಂದು ಕೇವಲ ದೂಷಿಸುವವರಿಗೆ ವೈರುಧ್ಯ ಏಕೆ ಹುಟ್ಟಿತು ಎಂಬುದು ಗಮನಕ್ಕಿರುವುದಿಲ್ಲ. ಅವರ ಭಾಷೆ, ಪಾಂಡಿತ್ಯ, ಬಳಸುವ ಪದಸಂದೋಹಗಳು ಪ್ರಾಯಶಃ ಸ್ವಲ್ಪ ಸಂಸ್ಕಾರವಿದ್ದವರೂ ಇಷ್ಟಪಡುವಂತವಲ್ಲ. ಯಾರನ್ನೂ ಅವಾಚ್ಯವಾಗಿ ನಿಂದಿಸದೇ, ತುಮರಿಯ ಅಕ್ಷರಗಳ ಏಟುಗಳು ಕೆಲವರ ಬೆನ್ನು ಮೂಳೆಗೇ ತಾಗಿವೆ ಎಂದು ತಿಳಿದುಬಂದಿದೆ! ಏಟು ತಿಂದವರು ಸ್ವಲ್ಪವಾದರೂ ಯೋಚಿಸಿದ್ದರೆ ಅವರ ಚರ್ಯೆಗಳು ಬದಲಾಗಬಹುದಿತ್ತೇನೋ.

ನಾವು ಯಕ್ಷಗಾನ, ಸಿನಿಮಾ, ನಾಟಕ ಮೊದಲಾದ ಮನೋರಂಜಕ ಕಾರ್ಯಕ್ರಮಗಳನ್ನು ನೋಡುತ್ತೇವೆ. ಅಲ್ಲಿನ ಕೆಲವು ಕಲಾವಿದರ ಪ್ರತಿಭೆಗೆ ನಾವು ಮಾರುಹೋಗುತ್ತೇವೆ. ಯಕ್ಷಗಾನದ ಯುವ ಭಾಗವತರ ಕಂಚಿನ ಕಂಠಕ್ಕೆ ಮರುಳಾಗಿ ಅವರನ್ನು ಮದುವೆಯಾಗಿರುವ ಹುಡುಗಿಯರ ಕತೆಗಳನ್ನೂ ಕೇಳಿದ್ದೇವೆ. ಹಾಗೆಯೇ ಸಿನಿಮಾ ಮತ್ತು ನಾಟಕಗಳಲ್ಲಿನ ಭಿನ್ನ ಲಿಂಗೀ ಕಲಾವಿದರು ಪರಸ್ಪರ ಮೆಚ್ಚಿ ಮದುವೆಯಾದ ಸಾಕಷ್ಟು ಘಟನೆಗಳನ್ನು ಓದಿ ತಿಳಿದಿದ್ದೇವೆ.

ಅದೇ ರೀತಿಯಲ್ಲಿ ಕೆಲವರಿಗೆ ಮಾತಿನ ಕಲೆಯೂ ಇರುತ್ತದೆ. ವಿಷಯವನ್ನು ಯಾರೇ ಬರೆದು ಕೊಟ್ಟರೂ ಮಂಡಿಸುವ ವಿಧಾನವಿದೆಯಲ್ಲ ಅದು ಒಬ್ಬೊಬ್ಬರಲ್ಲೂ ಭಿನ್ನವಾಗಿರುತ್ತದೆ; ಕೆಲವರು ಏನು ಹೇಳುತ್ತಿದ್ದಾರೆಂಬುದೇ ಅರ್ಥವಾಗದ ರೀತಿಯಲ್ಲಿದ್ದರೆ, ಕೆಲವರು ಹೇಳಿ ಮುಗಿದುಹೋಯ್ತಲ್ಲ, ಇನ್ನೂ ಹೇಳಬಹುದಿತ್ತಲ್ಲ ಎನಿಸುತ್ತದೆ. ಮಾತು[ಭಾಷಣ, ಪ್ರವಚನ], ಬರೆಹ, ಹಾಡು, ನೃತ್ಯ[ನಾಟ್ಯ], ಚಿತ್ರಕಲೆ ಮತ್ತು ಇನ್ನೂ ಅನೇಕ ಸಂಗತಿಗಳು ಲಲಿತಕಲೆಗಳ ಭಾಗವೇ ಆಗಿವೆ. ಆಯಾಯ ವಿಷಯಗಳಲ್ಲಿ ಆಸಕ್ತರಾದವರಿಗೆ ಮಾತ್ರ ಅವುಗಳಲ್ಲಿ ಪರಿಣತಿ ಪಡೆಯಲು ಸಾಧ್ಯ ಮತ್ತು ಆ ಮಾಧ್ಯಮದ ಮೂಲಕ ಅನ್ಯರಮೇಲೆ ಅಥವಾ ಸಮಾಜದ ಮೇಲೆ ಪರಿಣಾಮ ಬೀರಲು ಸಾಧ್ಯ.

’ಮಾತಿನಲ್ಲಿ ಮನೆಕಟ್ಟುವುದು’ ಎಂಬುದು ನಮ್ಮ ಸಮಾಜದ ಹಳೆಯಜನ ಹೇಳುತ್ತಿದ್ದ ಮಾತು. ಅದ್ಭುತವಾಗಿ ಮಾತನಾಡುವ ಕೆಲವರ ಮಾತಿಗೂ ಕೃತಿಗೂ ಸಂಬಂಧವಿರದಾಗ ಆ ಮಾತು ಹೇಳಲ್ಪಡುತ್ತಿತ್ತು. ಮಾತಿನಲ್ಲಿ ಮನೆ ಕಟ್ಟುವವರು ಹಿಂದಿದ್ದಂತೆ ಇಂದಿಗೂ ಇದ್ದಾರೆ, ಮುಂದೆಯೂ ಇರುತ್ತಾರೆ. ಅವರ ಮಾತುಗಳನ್ನು ಕೇಳುತ್ತಿದ್ದರೆ ಮುತ್ತುಗಳೇ ಉದುರಿದ ಹಾಗಿರುತ್ತವೆ. ಅವರು ಹೇಳುವ ಮಾತುಗಳಿಗೂ ಮತ್ತು ಅವರ ನಡತೆಗೂ ಯಾವ ಸಂಬಂಧವೂ ಇರುವುದಿಲ್ಲ.

ಅನ್ಯರಿಗೆ ಉಪದೇಶ ಕೊಡುವ ಸ್ವಭಾವದ ಅಂತವರು ತಮ್ಮ ಜೀವನದಲ್ಲಿ ತಾವು ಹೇಳಿದ್ದೆಲ್ಲದಕ್ಕೂ ವಿರುದ್ಧವಾಗಿ ನಡೆದುಕೊಳ್ಳುತ್ತಾರೆ. ಈ ಕಹಿಸತ್ಯದ ಅರಿವಿರುವ ಜನ, ’ಮಾತಿನಲ್ಲಿ ಮನೆಕಟ್ಟುವವ’ರಾರು ಎಂದು ಗುರುತಿಸಿ ಅವರ ಮಾತುಗಳನ್ನು ಕೇವಲ ರಂಜನೆಗಾಗಿ ಕೇಳುತ್ತಿದ್ದರು; ರಂಜನೆಯೂ ಆಯ್ತು, ಕಾಸೂ ಬಂತು ಅಂತ ಇವತ್ತು ಚುನಾವಣೆಗಳಲ್ಲಿ ಹಣ ತೆಗೆದುಕೊಂಡು ಪ್ರಚಾರ ನಡೆಸಿದ ಹಾಗೆ ಎನ್ನಬಹುದು. ಮಾತಿನಲ್ಲಿ ಮನೆ ಕಟ್ಟುವವರ ಸಾಲಿನಲ್ಲಿ ರಾಂಗ್ ವೇಷವೂ ಇದೆ; ಮಾತಿನ ಶೈಲಿಯಿಂದ ಮಹಿಳೆಯರನ್ನು ಬುಟ್ಟಿಗೆ ಹಾಕಿಕೊಳ್ಳುವುದು ಅದರ ನಡೆ.

ಅಂದಹಾಗೆ, ಬೆಂಗಳೂರಿನ ಚುನಾವಣೆಯಲ್ಲಿ ಕೆಲವರು ಮತ ಚಲಾಯಿಸಲು ಬಂದಾಗ ಸತ್ತೇ ಹೋದರು ಎಂಬುದನ್ನು ಅಂತರ್ಜಾಲದಲ್ಲಿ ಪತ್ರಿಕೆಗಳ ಮೂಲಕ ತಿಳಿದುಕೊಂಡೆ. ಮತ ಹಾಕಿದ ನಂತರ ಒಬ್ಬ ಸತ್ತರೆ, ಮತ ಹಾಕಲು ಹೊರಡುವಾಗ ಮನೆಯಲ್ಲೇ ಒಬ್ಬ ತೀರಿಹೋದ, ಮರದ ಟೊಂಗೆ ಮುರಿದುಬಿದ್ದು ಇನ್ನೊಬ್ಬ ಹೋದ. ಗಾಳಿ, ಮಳೆ ಯಾವುದೂ ಇಲ್ಲದ ವೇಳೆಯಲ್ಲಿ ಮರದ ಟೊಂಗೆ ಅವನು ಹಾದುಹೋದಾಗಲೇ ಮೈಮೇಲೆ ಬೀಳಬೇಕೆ?ಇದನ್ನೇ ವಿಧಿಲಿಖಿತ ಎನ್ನುವುದಲ್ಲವೇ?

ಸಂಸಾರದ ಬೀಜಗಳನ್ನು ವಿಧಿ ಮನುಷ್ಯನ ಮನಸ್ಸಿನಲ್ಲಿ ಬಿತ್ತಿರುತ್ತದಂತೆ. ಸಾಮಾನ್ಯರು ಅಂತಹ ವಿಷಯ ಬೀಜಗಳನ್ನು ಕಿತ್ತೆಸೆದು ಮುಕ್ತಿಪಡೆಯಲು ಸಾಧ್ಯವಾಗದು. ರಾಗಿ-ವಿರಾಗಿ ಎಂಬ ಪದಗಳು ಪರಸ್ಪರ ವಿರೋಧಾರ್ಥಕ ಪದಗಳಾಗಿವೆ. ವೈರಾಗ್ಯವೆಂಬುದು ರಾಗಿ ದೋಸೆ, ರಾಗಿಮುದ್ದೆ ತಿನ್ನುವುದರಿಂದ ಬರುವಷ್ಟು ಸಸಾರದ್ದಲ್ಲ. ಯಾವ ಆತ್ಮಕ್ಕೆ ಭೋಗಲೋಕದ ವಿಷಯಗಳಲ್ಲಿ ಕಿಂಚಿತ್ತೂ ಆಸಕ್ತಿಯಿಲ್ಲವೋ ಅಂತಹ ಆತ್ಮ ಮಾತ್ರ ವೈರಾಗ್ಯವನ್ನು ತಾಳುತ್ತದೆ. ಈ ಕುರಿತು ಕತೆಯೊಂದನ್ನು ನೋಡಿ-

ಉತ್ತರ ಭಾರತದ ಕೆಲವೆಡೆ ಜಾಟ್ ಎಂಬ ಬುಡಕಟ್ಟು ಜನಾಂಗವಿದೆ; ಅವರು ಕೃಷಿಕರು. ಜಾಟ್ ಬುಡಕಟ್ಟಿನಲ್ಲೇ ಕೆಲವು ಪ್ರಭೇದಗಳಿವೆ. ಅವುಗಳಲ್ಲಿ ರಾಂಜಾ ಎಂಬುದು ಒಂದು, ಸಿಯಲ್ ಎಂಬುದು ಇನ್ನೊಂದು. ಪಂಜಾಬ್ ನ ಝಾಂಗ್‍ನ ಸಿಯಲ್ ಜನಾಂಗದ ಮನೆತನವೊಂದರಲ್ಲಿ ಹುಟ್ಟಿದ್ದ ಹೀರ್ ಎಂಬಾಕೆ ಅಪ್ರತಿಮ ಸುಂದರಿಯಾಗಿದ್ದಳು. ಧೀಡೂ ಎಂಬಾತ ರಾಂಜಾ ಎಂಬ ಜನಾಂಗದವನಾಗಿದ್ದ. ಈರ್ವರ ಅಮೋಘ ಪ್ರೇಮ ಕತೆ ೧೯೭೦ರಲ್ಲಿಯೇ ಚಲನಚಿತ್ರವಾಗಿದೆ.

ಚೆನಾಬ್ ನದಿಯ ದಡದಲ್ಲಿದ್ದ ತಕ್ತ್ ಹಾಜ್ರಾದಲ್ಲಿ ಧೀಡೂ ರಾಂಜಾನ ಕುಟುಂಬ ವಾಸವಾಗಿತ್ತು. ನಾಲ್ವರು ಸಹೋದರರಲ್ಲಿ ಧೀಡೂನೇ ಕೊನೆಯ ಮತ್ತು ಸುಂದರ ಸೋದರ. ಧೀಡೂ ಕೊಳಲು ಊದುವುದರಲ್ಲಿ ನಿಷ್ಣಾತನಾಗಿದ್ದ. ಧೀಡೂ ಕೊಳಲೂದಲು ಆರಂಭಿಸಿದ ಎಂದರೆ, ಪುಣ್ಯ ಕೋಟಿಯ ಕತೆಯಲ್ಲಿ ಗೊಲ್ಲಗೋವಳನ ಕೊಳಲಿನ ದನಿಗೆ ಹಸುಗಳೆಲ್ಲ ಸ್ಪಂದಿಸುತ್ತಿದ್ದಂತೆ ಆ ಭಾಗದ ಜನರೆಲ್ಲ ತಲೆದೂಗುತ್ತಿದ್ದರು.

ಧೀಡೂ ಉಳಿದ ಕೆಲಸಗಳಲ್ಲಿ ಬಹಳಕಾಲ ಮೈಗಳ್ಳನಾಗಿದ್ದ. ಕಲಾವಿದರಲ್ಲಿ ನಾನು ನೋಡಿದ ದೊಡ್ಡ ಕಾಯಿಲೆ ಎಂದರೆ ಇದೇ; ಅವರು ಬಹಳ ಮೂಡಿಗಳಾರುತ್ತಾರೆ, ಇಷ್ಟವಾದ ಕೆಲಸವನ್ನು ಮಾತ್ರ ಅಷ್ಟೇ ಚೊಕ್ಕಾಗಿ ಮಾಡುತ್ತಾರೆ, ಉಳಿದ ಕೆಲಸಗಳಿಗೆ ಮನಸ್ಸು ಮಾಡುವುದಿಲ್ಲ. ಧೀಡೂನ ಅಣ್ಣಂದಿರು ಪಾಲಕರೊಡನೆ ಹೊಲದಲ್ಲಿ ಕೆಲಸಮಾಡಿ ಜೀವನ ನಿರ್ವಹಿಸುತ್ತಿದ್ದರು. ಪಾಲಕರಿಗೆ ಮುಪ್ಪು ಆವರಿಸಿ ಅಣ್ಣಂದಿರು ಮದುವೆಯಾದ ತರುವಾಯ ಸಹ ಧೀಡೂ ಬದಲಾಗಲಿಲ್ಲ. ಅತ್ತಿಗೆಯರು ಅವನನ್ನು ನಿತ್ಯವೂ “ಕೂಳಿಗೆ ದಂಡ” ಎಂದು ಬೈಯುತ್ತಿದ್ದರು. ಕೊನೆಗೊಮ್ಮೆ “ನಿನಗೆ ಇನ್ನು ಅನ್ನವನ್ನೇ ಹಾಕುವುದಿಲ್ಲ” ಎಂದುಬಿಟ್ಟರು. ಕುಟುಂಬಕ್ಕಿದ್ದ ಜಮೀನಿನಲ್ಲಿ ತನಗೆ ಯಾವ ಹಿಸ್ಸೆಯನ್ನೂ ನೀಡಲಿಲ್ಲ ಎಂದು ಧೀಡೂಗೆ ಬೇಸರವಾಯ್ತು. ಅವ ಮನೆಬಿಟ್ಟು ಬಹಳ ದೂರ ಹೋದ.

ಆಸರೆಗಾಗಿ ಊರೂರು ಅಲೆಯುತ್ತಿದ್ದಾಗ ಅವನಿಗೆ ದುಡಿಮೆಯ ಮಹತ್ವ ಗೊತ್ತಾಯಿತು. ಸಾಗುತ್ತ ಸಾಗುತ್ತ ಆತ ಝಾಂಗ್ ಪ್ರದೇಶಕ್ಕೆ ಬಂದು ತಲುಪಿದ. ಪ್ರಥಮವಾಗಿ ದೂರದಲ್ಲಿ ಹೀರ್‌ಳನ್ನು ಕಂಡ. ಆಗಿನ್ನೂ ಆ ಪ್ರದೇಶ ಅವನಿಗೆ ಹೊಸದು; ಅಲ್ಲಿಗೆ ಬಂದಿದ್ದು ಹೊಟ್ಟೆ ಹಸಿದು, ಹೀಗಾಗಿ ಏನಾದರೂ ಕೆಲಸಮಾಡಿ ಅನ್ನ ಸಂಪಾದಿಸಬೇಕಾಗಿತ್ತು. ಹೀರ್‌ಳ ಜೊತೆ ಗ್ರಾಮದೊಳಕ್ಕೆ ಅವರ ಮನೆಗೆ ಹೋದಾಗ ಅವಳ ತಂದೆ ಧೀಡೂಗೆ “ದನಗಾಹಿಯ ಕೆಲಸ ಮಾಡಿಕೊಂಡಿರುತ್ತೀಯೋ?’ ಎಂದರೆ, “ಆಗಬಹುದು”ಎಂದು ಒಪ್ಪಿಕೊಂಡ. ಮರುದಿನದಿಂದಲೇ ಧೀಡೂ ದನಗಾಹಿಯಾದ.

ದನಗಾಹಿಗಳಿಗೆ ಗೋಮಾಳದಲ್ಲಿ ಇನ್ನೇನು ಕೆಲಸ? ಆಗಾಗ ಸಿಗುವ ಸಮಯದಲ್ಲಿ ಕೊಳಲನ್ನು ನುಡಿಸುವುದಕ್ಕೆ ಯಾರ ಆಕ್ಷೇಪವೂ ಇರದಲ್ಲ? ಸುಮಾರು ದೂರದವರೆಗೂ ಕೇಳುತ್ತಿದ್ದ ಅವನ ಕೊಳಲ ದನಿ ಒಂದು ದಿನ ಹೀರ್‍‌ಳ ಎದೆಯ ಬಾಗಿಲನ್ನೂ ತಟ್ಟಿತು! ನಿತ್ಯವೂ ಅವನನ್ನು ಹಿಂಬಾಲಿಸಿ ಮರೆಯಲ್ಲಿ ನಿಂತು ಅವನ ಕೊಳಲದನಿಗೆ ಮೈಮರೆಯುತ್ತಿದ್ದ ಹೀರ್ ತನ್ನೆದೆಯ ಬಾಗಿಲನ್ನು ತೆರೆದು ಧೀಡೂವಿಗೆ ಅಲ್ಲಿ ಅವಕಾಶ ನೀಡಿದಳು. ವಿಷಯ ತಿಳಿದಾಗ ಧೀಡೂಗೆ ಬಹಳ ಸಂತೋಷವಾಯ್ತು. ನಂತರ ಹಲವು ವರ್ಷಗಳ ತನಕ ಅವರ ಪ್ರೇಮಸಲ್ಲಾಪ ಮುಂದುವರಿದಿತ್ತು.

ಒಂದುದಿನ ಗೋಮಾಳದ ಹಾದಿಯಾಗಿ ಹಾದುಹೋಗುತ್ತಿದ್ದ ಹೀರ್‍‌ಳ ಚಿಕ್ಕಪ್ಪ ಹೀರ್-ರಾಂಜಾ ಒಟ್ಟಿಗೆ ಅಪ್ಪಿ ಕುಳಿತಿರುವುದನ್ನು ಕಂಡುಬಿಟ್ಟ. ಮನೆಗೆ ನಡೆದವನೇ ಅವಳ ತಂದೆ-ತಾಯಿಯರನ್ನೂ ಕರೆತಂದು ತೋರಿಸಿದ. ಅಂದೇ ಕೊನೆ. ಮತ್ತೆಂದೂ ಹೀರ್‍‌ಮನೆಯಾಚೆಗೆ ಹೋಗದಂತೆ ನೋಡಿಕೊಂಡ ಅವಳ ಪಾಲಕರು ಬೇರೊಬ್ಬ ಯುವಕನೊಡನೆ ಅವಳ ಮದುವೆಯನ್ನೂ ಮಾಡಿಬಿಟ್ಟರು. ಹೀರ್‍‌ಳನ್ನು ಬಿಟ್ಟಿರಲಾರದ ಧೀಡೂಗೆ ಮತ್ತೆ ಅಲ್ಲಿರಲು ಸಾಧ್ಯವಾಗದೇ ದೇಶಸಂಚಾರಿಯಾಗಿ ಹೊರಟುಹೋದ.

ಹಿಮಾಲಯದೆಡೆಗೆ ಅಲೆಯುತ್ತಿದ್ದಾಗ ಗೋರಖನಾಥ ಎಂಬ ಜೋಗಿ[ಯೋಗಿ]ಯ ಪರಿಚಯವಾಯ್ತಂತೆ. ಅವರು ಕಿವಿಗಳನ್ನು ಚುಚ್ಚಿಸಿಕೊಂಡಿದ್ದರು. ತಮ್ಮ ಅನುಯಾಯಿಗಳೂ ಹಾಗೆಯೇ ಮಾಡಬೇಕೆಂದು ಅವರ ಅಭಿಪ್ರಾಯವಾಗಿತ್ತು. ಅವರೊಡನೆ ಇರಹತ್ತಿದ ಧೀಡೂ ತಾನೂ ಕಿವಿಚುಚ್ಚಿಸಿಕೊಂಡು ಜೋಗಿಯೆಂದು ಹೇಳಿಕೊಂಡ, ಅವರನ್ನೇ ಅನುಕರಿಸಿದ. ಒಂದೆರಡು ವರ್ಷಗಳು ಕಳೆದವು. ಅಲ್ಲಿಂದ ಹೊರಟು ಊರೂರು ಅಲೆಯುತ್ತ ಕೊನೆಗೊಮ್ಮೆ ಹೀರ್‍ ಇರುವ ಊರನ್ನು ತಲ್ಪಿದ. ಅಲ್ಲಿ ಹುಡುಕಿ ಹುಡುಕಿ ಹೀರ್‍ ಕಣ್ಣಿಗೆ ಬಿದ್ದಾಗ ತನ್ನ ಹೃದಯದ ಬೇಗುದಿಯನ್ನು ತೋಡಿಕೊಂಡ. ಆತ್ತ ಹೀರ್‍‌ಳಿಗೂ ಇವನಿಲ್ಲದೇ ಸಾಕಾಗಿ ಹೋಗಿತ್ತು, ಇತ್ತ ಇವನಿಗೂ ಹೀರ್‍ ಇರದ ಬಾಳು ಬರಡಾಗಿತ್ತು. ಭೇಟಿಯಾದಾಗ ಪರಸ್ಪರ ಜೋರಾಗಿ ಬಿಗಿದಪ್ಪಿ ಆಲಂಗಿಸಿಕೊಂಡರು.

ವಿಷಯ ತಿಳಿದ ಹೀರ್ ತವರಿನವರು ಹೀರ್ ರಾಂಜಾ[ಧೀಡೂ]ನನ್ನು ಮದುವೆಯಾದರಾದರೂ ನೆಮ್ಮದಿಯಿಂದಿರಬಹುದು ಎಂದುಕೊಂಡರು. ಅವರೀರ್ವರ ಮದುವೆಗೆ ತಯಾರಿ ನಡೆಸಿದರು. ಹೀರ್‍‍ಳನ್ನು ಗುಪ್ತವಾಗಿ ತನ್ನಿಂದ ಬೇರ್ಪಡಿಸಿ ರಾಂಜಾನಿಗೆ ಮದುವೆ ಮಾಡುವ ಸಂಗತಿ ಅವಳ ಗಂಡನಿಗೆ ಗೊತ್ತಾಯಿತು. ಹೇಗಾದರೂ ಮಾಡಿ ಮದುವೆಯನ್ನು ನಿಲ್ಲಿಸಬೇಕೆಂಬ ಹಠದಿಂದ ಕಾರ್ಯಕ್ರಮಗಳ ಆರಂಭದಲ್ಲಿ ತಯಾರಿಸಿದ ಲಾಡಿನಲ್ಲಿ ಯಾರಿಗೂ ಗೊತ್ತಾಗದಂತೆ ವಿಷಬೆರೆಸಿ ಹೀರ್‍‌ಗೆ ಕೊಟ್ಟ. ಹೀರ್‍‌ಳ ಗಂಡ ಮದುವೆ ತಪ್ಪಿಸಲು ವಿಷಪ್ರಯೋಗ ನಡೆಸಿರುವ ಸುದ್ದಿ ತಡವಾಗಿ ಧೀಡೂ ರಾಂಜಾನನ್ನು ತಲುಪಿತು. ಓಡೋಡುತ್ತಲೇ ಬಂದ ಅವನಿನ್ನೂ ಹೀರ್‍ ‍ಳನ್ನು ತಲುಪುವಷ್ಟರಲ್ಲೇ ಕತೆ ಮುಗಿದುಹೋಗಿತ್ತು; ಲಾಡು ತಿಂದ ಹೀರ್‍ ಇಹಲೋಕ ತ್ಯಜಿಸಿದ್ದಳು. ಆರೆನಿಮಿಷದಲ್ಲಿ ಅವಳಿಗಾಗಿ ಕೊಟ್ಟಿದ್ದ ಇನ್ನೊಂದು ಲಾಡನ್ನು ತಾನೂ ತಿಂದ ಧೀಡೂ ಕೆಲಹೊತ್ತಿನಲ್ಲೇ ಅವಳ ಪಕ್ಕದಲ್ಲಿ ಅಸುನೀಗಿದ.

ಹೀಗಿದೆ ಈ ಅಮರ ಪ್ರೇಮಿಗಳ ಕತೆ. ನಂತರ ಅವರನ್ನು ದಫನ ಮಾಡಿ ಸ್ಮಾರಕವನ್ನು ಮಾಡಿದರು, ಅದು ಇಂದಿಗೂ ಇದೆ ಎಂದು ಹೇಳಲಾಗುತ್ತದೆ. ಇಂದು ಇಂತಹ ಪ್ರೇಮಿಗಳಿದ್ದಾರೆ ಎಂಬುದನ್ನು ನಾನು ಒಪ್ಪುವುದಿಲ್ಲ. ಇಂದಿನ ಪ್ರೇಮ-ಪ್ರೀತಿಗಳೆಲ್ಲ ಹುಡುಗನ ಜೇಬು ಗಟ್ಟಿಯಾಗಿರುವವರೆಗೆ ಮತ್ತು ಹುಡುಗಿ ಚಂದ ಇರುವವರೆಗೆ ನಡೆಯುವಂತವು. ಅದೇನೇ ಇರಲಿ, ಜೋಗಿಯೆಂದು ವಿರಾಗಿ ವೇಷ ತೊಟ್ಟ ಧೀಡೂ ಸಾಕಷ್ಟು ದಿನ ಸಿಗದ ಹೀರ್‍‌ಳ ನೆನಪಿನಲ್ಲಿ ವೈರಾಗ್ಯ ತಳೆದಿದ್ದರೂ ಸಂಸಾರ ಲೋಕದ ಪ್ರೇಮದ ಬೀಜಗಳು ಅವನ ಸುಪ್ತ ಮನಸ್ಸಿನಲ್ಲಿ ಹಾಗೇ ಉಳಿದಿದ್ದವು. ಜಾಗೃತಾವಸ್ಥೆಯಲ್ಲಿ ಆಗಾಗ ಹೀರ್‌ಳ ನೆನಪಾಗುತ್ತಿದ್ದರಿಂದಲೇ ರಾಂಜಾ ಅವಳನ್ನು ಮತ್ತೆ ಹುಡುಕಿಕೊಂಡು ಹೋಗಿದ್ದ.

ಅಪ್ಪಟ ನಿದ್ರೆ[ಸುಷುಪ್ತಿ]ಯಲ್ಲಿ ನಮಗೆ ಸಂಸಾರಲೋಕದ ಯಾವ ನಂಟೂ ಇರುವುದಿಲ್ಲ ಎಂಬುದನ್ನು ಗಮನಿಸಿ. ಅಲ್ಲಿ ಯಾವ ರಾಗದ್ವೇಷಗಳಗಲೀ, ಪ್ರೀತಿ, ಅಸೂಯೆಗಳಾಗಲೀ ಇರುವುದಿಲ್ಲ. ಎಲ್ಲವನ್ನೂ ಕಳಚಿಕೊಂಡ ಅನಿರ್ವಿಣ್ಣ ಸ್ವರೂಪ ಅದು. ಈ ಲೋಕದ ನಮ್ಮ ಅಸ್ಥಿತ್ವವನ್ನೇ ಮರೆತ ಸ್ಥಿತಿ ಅದು. ಆದರೆ ನಿದ್ರೆಯಲ್ಲಿ ಅದಕ್ಕಿಂತ ಹೆಚ್ಚಿನ ಸಾಧನೆಯೇನೂ ಇರುವುದಿಲ್ಲ. ನಿದ್ರೆಯಿಂದ ಜಾಗೃತಿಗೆ ಮರಳುತ್ತಿದ್ದಂತೆ ಸಂಸಾರ ಲೋಕದ ಬೀಜಗಳು ಮತ್ತೆ ಗಿಡಮರಗಳಾಗಿ ತಲೆಯನ್ನು ತುಂಬಿಕೊಂಡುಬಿಡುತ್ತವೆ.

ಯೋಗಿಗಳಿಗೆ ಮಾತ್ರ ಇದರಿಂದ ಮುಕ್ತಿಯಿದೆ. ಯೋಗವೇ ಇದಕ್ಕೆ ಸಾಧನವಾಗಿದೆ. ಯೋಗದ ಸಮಾಧಿ ಸ್ಥಿತಿ ಎಂಬುದು ನಿದಿಧ್ಯಾಸನ ಎಂಬ ಕ್ರಿಯೆಗೆ ಅನುಕೂಲ ಕಲ್ಪಿಸುತ್ತದೆ. ಆ ಸ್ಥಿತಿಯಲ್ಲಿ ನಿದ್ರೆಯಿರುತ್ತದೆ; ಆದರೆ ಎಚ್ಚರವೂ ಇರುತ್ತದೆ. ಹೇಗಪ್ಪಾ ಅಂದರೆ ಮನಸ್ಸು ನಿರ್ಮಲ ಶಾಂತಿಯನ್ನು ಅನುಭವಿಸುತ್ತದೆ. ಸಂಸಾರಲೋಕದ ಬೀಜಗಳನ್ನು ಬದಿಗಿರಿಸುತ್ತದೆ. ಜಾಗೃತವಾಗಿದ್ದರೂ ಸುಷುಪ್ತಿಯಲ್ಲಿರುವ ಹಾಗಿರುತ್ತದೆ.

ಋಷಿಗಳಿಗೆ ತಪೋಭಂಗವಾಯ್ತು ಎಂದು ಪುರಾಣದ ಕತೆಗಳಲ್ಲಿ ನಾವು ಕೇಳುತ್ತೇವೆ. ಸಮಾಧಿ ಸ್ಥಿತಿಯಲ್ಲಿ ಜಾಗೃತವಾಗಿದ್ದ ನಿರ್ಮಲ, ಪ್ರಶಾಂತ ಮನಸ್ಸಿನಲ್ಲಿ ಸಂಸಾರ ಲೋಕದ ಬೀಜಗಳು ಕಾಣಿಸಿಕೊಂಡುಬಿಟ್ಟರೆ ಸಮಾಧಿಸ್ಥಿತಿ ಅಂತ್ಯಗೊಳ್ಳುತ್ತದೆ. ಅದನ್ನೇ ತಪೋ ಭಂಗವೆಂದು ಕರೆಯುತ್ತೇವೆ. ಋಷಿಗಳ ತಪೋಭಂಗ ಸಾಮಾನ್ಯವಾಗಿ ಸಾಧ್ಯವಾಗುವುದಿಲ್ಲ. ಅಸಾಮಾನ್ಯರಾದವರು ಅದಕ್ಕೆ ಶ್ರಮಿಸಿ ಸೋತಿದ್ದೂ ಉಂಟು. ಕೆಲವರು ಗೆದಿದ್ದೂ ಉಂಟು. ರಾಜರ್ಷಿ ವಿಶ್ವಾಮಿತ್ರರ ತಪೋಭಂಗ ನಡೆದಿತ್ತು, ಮತ್ತೆ ಇಪ್ಪತ್ತೈದು ವರ್ಷ ಅಪ್ಪಟ ಸಂಸಾರಿಯಂತೆ ಬದುಕಿ ಶಕುಂತಲೆ ಹುಟ್ಟಿದಳು. ಅವಳು ಚಿಕ್ಕವಳಿರುವಾಗಲೇ ವಿಶ್ವಾಮಿತ್ರರಿಗೆ, ಸಂಸಾರ ಬೀಜಗಳಿಂದಾದ ತೊಂದರೆಯ ಅರಿವಾಗಿ ಮೇನಕೆಗೆ ಡೈವೋರ್ಸ್ ಕೊಟ್ಟರು! ಅಪ್ಪ-ಅಮ್ಮನಿಂದ ತ್ಯಜಿಸಲ್ಪಟ್ಟ ಮಗು ಕಣ್ವರ ಆಶ್ರಮದಲ್ಲಿ ಬೆಳೆಯಿತು. ಮುಂದಿನ ಕತೆಯೆಲ್ಲ ನಿಮಗೆ ತಿಳಿದೇ ಇದೆ. ಅಂದು ಕಣ್ವರಂತವರು ಇದ್ದರು, ಕಾಡೂ ಇತ್ತು, ಸಾಕಿದರು, ಇಂದು ಹಾಗೆಲ್ಲ ಆದರೆ ಯಾರು ಗತಿ? ದೇವರೇ ಗತಿ.

ದೈವ ಸಂಕಲ್ಪದಿಂದ ಧರೆಗಿಳಿದ ಮೇನಕೆ, ವಿಶ್ವಾಮಿತ್ರರಲ್ಲಿ ವಿಷ-ಯ ಬೀಜಗಳನ್ನು ಬಿತ್ತಿದಳು. ತನ್ಮೂಲಕ ಅವರ ತಪಸ್ಸಿನಿಂದ ಬಂದಿದ್ದ ಧನಾತ್ಮಕ ಶಕ್ತಿಯ ಬಹುಪಾಲು ವ್ಯಯವಾಗಿ ಹೋಯಿತು. ತಪ್ಪನ್ನು ಗ್ರಹಿಸಿ, ವಿವೇಚಿಸಿ, ಸಂಸಾರವನ್ನು ಕಿತ್ತೊಗೆದ ವಿಶ್ವಾಮಿತ್ರರ ತಪಸ್ಸಿನ ಶಕ್ತಿ ತ್ರಿಶಂಕು ಸ್ವರ್ಗವನ್ನೇ ಸೃಷ್ಟಿಸಿತು.

ಇಂದು ನಮ್ಮಲ್ಲಿ ವಿಶ್ವಾಮಿತ್ರರಂತೆಯೇ ಇರುವ ಯತಿಗಳಿದ್ದಾರೆ ಎಂದು ಕೆಲವರು ಹೇಳಿಕೊಳ್ಳಬಹುದು. ಆದರೆ ವಿಶ್ವಾಮಿತ್ರರ ಹೆಸರಿನ ಒಂದಕ್ಷರವನ್ನೂ ಬಳಸಲು ಅರ್ಹತೆಯಿಲ್ಲದ ಕಳ್ಳರು ಹಲವು ಹೆಣ್ಣುಗಳೊಡನೆ ತಾವೇ ಚಕ್ಕಂದವಾಡುತ್ತಾರೆ. ತಪಸ್ಸು ಎಂದರೇನೆಂದೇ ತಿಳಿಯದವರು ಅನ್ಯರಿಗೆ ಅವೈದಿಕ ಮಾರ್ಗದ ಆಚರಣೆಗಳನ್ನು ಉಪದೇಶಿಸುತ್ತಾರೆ. ಪೂಜಾ ಪರಿಕರಗಳನ್ನೋ ನೈವೇದ್ಯ, ಆರತಿಗಳನ್ನೋ ಇಟ್ಟುಕೊಳ್ಳದೇ ಪೂಜೆ ನಡೆಸಬಹುದು. ಅದನ್ನು ಆನಾದಿಯಲ್ಲಿ ಆದಿ ಶಂಕರರೇ ’ಶಿವಮಾನಸ ಸ್ತೋತ್ರ’ ಎಂಬ ಕೃತಿಯ ಮೂಲಕ ಹೇಳಿದ್ದಾರೆ. ಮಾನಸ ಪೂಜೆಗೆ ಮನಸ್ಸು ಮಡಿಯಾಗಿರುವುದು ಬಹಳ ಮುಖ್ಯ. ’ಮಾನಸ’ ಎಂಬ ಹೆಸರಿನ ಜಾತಿಯವರೇ ಮನಸ್ಸಿನ ತುಂಬ ತುಂಬಿಕೊಂಡಿರುವಾಗ ಮಾನಸ ಪೂಜೆ ಡಂಬಾಚಾರವೇ ಆಗುತ್ತದೆ.

Thumari Ramachandra

source: https://www.facebook.com/groups/1499395003680065/permalink/1655063088113255/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s